ಪ್ರೀತಿಸಿದ ಯುವತಿಯ ಕೊಲೆ ಪ್ರಕರಣ, ಆರೋಪಿ ಬಂಧನ

ಶಿವಮೊಗ್ಗ: ನಿನ್ನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾನೇ ಪ್ರೀತಿಸಿದ ಯುವತಿಯನ್ನು ಬಲವಂತವಾಗಿ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಯುವತಿಯನ್ನು ಭದ್ರಾವತಿ ತಾಲ್ಲೂಕಿನ ಅಂತರಗಂಗೆ ಬಳಿಯ ಯರೇಹಳ್ಳಿಯ ಬೋವಿ ಕಾಲೋನಿಯ ಸ್ವಾತಿ ಅಲಿಯಾಸ್ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಯುವತಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ

ಸೂರ್ಯ ಮತ್ತು ಸ್ವಾತಿ ದೂರದ ಸಂಬಂಧಿಕರಾಗಿದ್ದರು ಎನ್ನಲಾಗಿದೆ. ಸೆಪ್ಟೆಂಬರ್ 21 ರಂದು ಸೂರ್ಯನು ಯುವತಿಯನ್ನು ಮನೆಯಿಂದ ಕರೆದುಕೊಂಡು ಹೋಗಿ, ಗ್ರಾಮದ ಹೊರಗಿರುವ ಭದ್ರಾ ಕಾಲುವೆಗೆ ನೂಕಿದ್ದಾನೆ ಎಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊದಲಿಗೆ ಯುವತಿಯ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಸೆಪ್ಟೆಂಬರ್ 24 ರಂದು ಕಾಲುವೆಯಲ್ಲಿ ಮಗಳ ಮೃತದೇಹ ಪತ್ತೆಯಾದ ಬಳಿಕ, ಅವರು ಕೊಲೆ ಪ್ರಕರಣ ದಾಖಲಿಸಿದರು.

ಸೂರ್ಯನು ಪ್ರೇಯಸಿಯನ್ನು ಕಾಲುವೆಗೆ ನೂಕಿದ ನಂತರ, ತಾನೂ ಸಹ ದಡದ ಮೇಲೆ ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು