ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ: ಹೋರಾಟಗಾರ ಮಹೇಶ್ ತಿಮರೋಡಿಗೆ ಮೂರನೇ ನೋಟಿಸ್

ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ತಿಮರೋಡಿ ಅವರ ನಿವಾಸಕ್ಕೆ ಪೊಲೀಸರು ಮೂರನೇ ನೋಟಿಸ್ ಅಂಟಿಸಿದ್ದಾರೆ. ಈ ಹಿಂದೆ ಪತ್ತೆಯಾದ ಎರಡು ತಲ್ವಾರ್‌ಗಳು ಮತ್ತು ಒಂದು ಬಂದೂಕಿಗೆ ಸಂಬಂಧಿಸಿದಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಎರಡು ಬಾರಿ ತಪ್ಪಿಸಿಕೊಂಡ ತಿಮರೋಡಿ

ಬೆಳ್ತಂಗಡಿ ಠಾಣೆ ಪೊಲೀಸರು ಈಗಾಗಲೇ ಎರಡು ಬಾರಿ ಮಹೇಶ್ ತಿಮರೋಡಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಅವರು ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ, ಪೊಲೀಸರು ಅವರ ನಿವಾಸಕ್ಕೆ ಮೂರನೇ ನೋಟಿಸ್ ಅಂಟಿಸಿದ್ದಾರೆ. ಈ ನೋಟಿಸ್‌ನಲ್ಲಿ ಸೆಪ್ಟೆಂಬರ್ 29 ರಂದು ಕಡ್ಡಾಯವಾಗಿ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ

ಈ ನಡುವೆ, ಮಹೇಶ್ ತಿಮರೋಡಿ ಅವರು ಬಂಧನದಿಂದ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರ ಜಾಮೀನು ಅರ್ಜಿ ಕುರಿತು ಸೆಪ್ಟೆಂಬರ್ 27 ರಂದು ಮಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಕೋರ್ಟ್‌ನ ತೀರ್ಪು ಹೊರಬೀಳುವ ಮೊದಲೇ ಪೊಲೀಸರು ಮೂರನೇ ನೋಟಿಸ್ ಜಾರಿ ಮಾಡಿರುವುದು ಗಮನಾರ್ಹವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು