ರೈಲಿನಲ್ಲಿ ಟಿಕೆಟ್ ಕೇಳಿದ ಪ್ರಯಾಣಿಕರ ಟಿಕೆಟ್ ಪರೀಕ್ಷಕ (TC) ಗೆ ವೃದ್ಧೆಯೊಬ್ಬರು ಟಿಕೆಟ್ ಬದಲಿಗೆ ಆಧಾರ್ ಕಾರ್ಡ್ ತೋರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಜ್ಜಿಯ ಈ ಮುಗ್ಧ ನಡೆಗೆ ನೆಟ್ಟಿಗರು ಕರಗಿದ್ದರೆ, ಪರಿಸ್ಥಿತಿಯನ್ನು ನಿಭಾಯಿಸಿದ ಟಿಸಿ ತಾಳ್ಮೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಮುಗ್ಧತೆಗೆ ಸೋತ ಟಿಸಿ
ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಟಿಸಿ ಟಿಕೆಟ್ ಪರಿಶೀಲನೆಗೆ ಬಂದಾಗ ಅಜ್ಜಿ ಗೊಂದಲಕ್ಕೊಳಗಾಗಿ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತೋರಿಸುವಂತೆಯೇ ರೈಲಿನಲ್ಲಿಯೂ ಅದನ್ನು ತೋರಿಸಿದ್ದಾರೆ.
ಅಜ್ಜಿಯ ಮುಗ್ಧತೆಗೆ ಸೋತ ಟಿಸಿ ನಗುತ್ತಾ ಆಧಾರ್ ಕಾರ್ಡನ್ನು ವಾಪಸ್ ನೀಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ.
ಒಬ್ಬ ನೆಟ್ಟಿಗರು, "ಟಿಕೆಟ್ ಇಲ್ಲದೇ ಪ್ರಯಾಣಿಸಿದ ಅಜ್ಜಿಗೆ ದಂಡ ಹಾಕಿ, ಆ ದಂಡದ ಹಣವನ್ನು ಟಿಸಿಯೇ ಭರಿಸಿರಬಹುದು," ಎಂದು ಊಹಿಸಿ ಕಮೆಂಟ್ ಮಾಡಿದ್ದಾರೆ.
ರಾಜಕೀಯ ತಿರುವು ನೀಡಿದ ನೆಟ್ಟಿಗರು
ಈ ಮುಗ್ಧ ಘಟನೆಗೆ ಕೆಲವರು ರಾಜಕೀಯ ತಿರುವು ನೀಡಿದ್ದಾರೆ. ಸಿಕಂದರ್ ಎಂಬುವವರು ವಿಡಿಯೋ ಹಂಚಿಕೊಂಡು, "ರೈಲಿನಲ್ಲಿ ಉಚಿತ ಪ್ರಯಾಣಕ್ಕಾಗಿ ಆಧಾರ್ ಕಾರ್ಡ್ ತೋರಿಸಿದ ಅಜ್ಜಿ... ಪಾಪ ಆ ಮುಗ್ಧ ಮನಸ್ಸಿಗೆ ಏನು ಗೊತ್ತು, ರೈಲ್ವೆ ಇಲಾಖೆಯನ್ನು ಆಳುವ ಮೋದಿ ಒಬ್ಬ ಬಡವರ ವಿರೋಧಿ ಎಂದು. ಈ ಅಜ್ಜಿಯ ಕನಸು ನನಸಾಗಲು ನಮ್ಮ ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಪ್ರಧಾನಿಯಾಗಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋ ಕ್ಲಿಪ್, ಸರ್ಕಾರಿ ಸೌಲಭ್ಯಗಳು ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.