KMDCಯಿಂದ ವಿವಿಧ ಸಾಲ ಯೋಜನೆ: ಅಲ್ಪಸಂಖ್ಯಾತರಿಂದ ಅರ್ಜಿ ಆಹ್ವಾನ

ಬೆಂಗಳೂರು/ಕಲಬುರಗಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ವು 2025-26ನೇ ಸಾಲಿಗೆ ವಿವಿಧ ಸ್ವಯಂ ಉದ್ಯೋಗ ಮತ್ತು ಶೈಕ್ಷಣಿಕ ಯೋಜನೆಗಳಡಿ ಸಾಲ ಸೌಲಭ್ಯಗಳನ್ನು ನೀಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರು ಸೇರಿದಂತೆ ಮತೀಯ ಅಲ್ಪಸಂಖ್ಯಾತರು ಈ ಯೋಜನೆಗಳ ಪ್ರಯೋಜನ ಪಡೆಯಬಹುದು.

ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕವಾಗಿದೆ.

KMDC ಯ ಪ್ರಮುಖ ಸಾಲ ಮತ್ತು ಸಹಾಯಧನ ಯೋಜನೆಗಳು

ನಿಗಮವು ಅಲ್ಪಸಂಖ್ಯಾತ ಸಮುದಾಯದವರ ಆರ್ಥಿಕ ಸಬಲೀಕರಣಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ:

  1. ವಿದೇಶ ವ್ಯಾಸಂಗಕ್ಕೆ ಸಾಲ ಯೋಜನೆ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಗರಿಷ್ಠ ರೂ. 20 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಈ ಸಾಲವನ್ನು ಆಸ್ತಿಯನ್ನು (ಕಟ್ಟಡ/ಜಮೀನು) ಅಡಮಾನವಿಟ್ಟು ಮಾತ್ರ ಒದಗಿಸಲಾಗುತ್ತದೆ.

  2. ವ್ಯಾಪಾರ/ಉದ್ದಿಮೆ ನೇರಸಾಲ ಯೋಜನೆ: ವ್ಯಾಪಾರ, ಉದ್ದಿಮೆ ಪ್ರಾರಂಭಿಸಲು ಅಥವಾ ವಿಸ್ತರಿಸಲು ರೂ. 5 ಲಕ್ಷದಿಂದ ರೂ. 20 ಲಕ್ಷಗಳವರೆಗೆ ಸಾಲ ಲಭ್ಯವಿದೆ. ಇದು ಆರ್ಥಿಕ, ಸೇವಾ ಕ್ಷೇತ್ರ ಮತ್ತು ಕೃಷಿ ಆಧಾರಿತ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

  3. ಸ್ವಾವಲಂಬಿ ಸಾರಥಿ ಯೋಜನೆ: ಟ್ಯಾಕ್ಸಿ, ಗೂಡ್ಸ್ ವಾಹನ ಅಥವಾ ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಗೆ ಬ್ಯಾಂಕಿನಿಂದ ಸಾಲ ಮಂಜೂರಾಗಿದ್ದಲ್ಲಿ, ನಿಗಮದಿಂದ ವಾಹನದ ಮೌಲ್ಯದ ಶೇ. 50ರಷ್ಟು, ಗರಿಷ್ಠ ರೂ. 3 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.

  4. ಶ್ರಮಶಕ್ತಿ ಸಾಲ ಯೋಜನೆ: ಸಣ್ಣ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ರೂ. 50 ಸಾವಿರಗಳ ಒಳಗೆ ಶೇ. 50ರಷ್ಟು ಸಾಲ ಮತ್ತು ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ. ಈ ಸಾಲಕ್ಕೆ ಶೇ. 4ರಷ್ಟು ಬಡ್ಡಿ ದರ ಅನ್ವಯವಾಗುತ್ತದೆ.

  5. ವೃತ್ತಿ ಪ್ರೋತ್ಸಾಹ ಯೋಜನೆ: ಹಣ್ಣು, ಹಂಪಲು, ಕೋಳಿ ಮತ್ತು ಮೀನು ಮಾರಾಟ, ಬೇಕರಿ, ಡ್ರೈ ಕ್ಲೀನಿಂಗ್ ಮುಂತಾದ ಚಟುವಟಿಕೆಗಳಿಗೆ ರೂ. 1 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಇದರಲ್ಲಿ ಶೇ. 50ರಷ್ಟು ಸಹಾಯಧನವಿರುತ್ತದೆ.

  6. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ: ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳಾ ಸ್ವ-ಸಹಾಯ ಗುಂಪುಗಳು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯುವ ಸಾಲಕ್ಕೆ, ಘಟಕ ವೆಚ್ಚದ ಶೇ. 50 ಅಥವಾ ಗರಿಷ್ಠ ರೂ. 2 ಲಕ್ಷದವರೆಗೆ ಸಹಾಯಧನ ಒದಗಿಸಲಾಗುತ್ತದೆ.

  7. ರೇಷ್ಮೆ ನೂಲು ಬಿಚ್ಚಾಣಿಕೆ ಪ್ರೋತ್ಸಾಹ: ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಫಲಾನುಭವಿಗಳಿಗೆ ದುಡಿಮೆ ಬಂಡವಾಳ ಮತ್ತು ಮೂಲಭೂತ ಸೌಕರ್ಯಕ್ಕಾಗಿ ರೂ. 2 ಲಕ್ಷದವರೆಗೆ ಸಾಲ ಮತ್ತು ಸಹಾಯಧನ (ಶೇ. 50 ಸಹಾಯಧನ) ಲಭ್ಯವಿದೆ.

  8. ಸಾಂತ್ವನ ಯೋಜನೆ: ರಾಜ್ಯದಲ್ಲಿ ಕೋಮು ಗಲಭೆ, ಹಿಂಸಾಚಾರ ಅಥವಾ ಪರಿಸರ ವಿಕೋಪಗಳಿಂದ ಕನಿಷ್ಠ ರೂ. 2 ಲಕ್ಷ ನಷ್ಟ ಅನುಭವಿಸಿದ ವ್ಯಾಪಾರ ಕೇಂದ್ರಗಳು ಅಥವಾ ವಾಸದ ಮನೆಗಳ ಮಾಲೀಕರಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತದೆ. 

ವಿಶೇಷ/ದುರ್ಬಲ ವರ್ಗದವರಿಗೆ: ರಾಜ್ಯದಲ್ಲಿನ ವಿಶೇಷ ಅಥವಾ ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಠ ರೂ. 5 ಲಕ್ಷದ ಘಟಕ ವೆಚ್ಚಕ್ಕೆ ಶೇ. 50ರಷ್ಟು ಸಹಾಯಧನ ಹಾಗೂ ಶೇ. 3ರ ಬಡ್ಡಿದರದಲ್ಲಿ ಶೇ. 50ರಷ್ಟು ಸಾಲ ನೀಡಲಾಗುವುದು.

ಅರ್ಜಿ ಸಲ್ಲಿಸಲು ಪ್ರಮುಖ ಅರ್ಹತೆಗಳು ಮತ್ತು ನಿಯಮಗಳು

ಸಾಲ ಸೌಲಭ್ಯ ಪಡೆಯಲು ಅರ್ಜಿದಾರರು ಈ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಬೇಕು:

  • ನಿವಾಸ: ಅರ್ಜಿದಾರರು ಜಿಲ್ಲೆಯ ಕನಿಷ್ಠ 15 ವರ್ಷಗಳ ಖಾಯಂ ನಿವಾಸಿಯಾಗಿರಬೇಕು.

  • ಆದಾಯ ಮಿತಿ: ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 4.50 ಲಕ್ಷ ಮೀರಿರಬಾರದು.

  • ವಯೋಮಿತಿ: ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷಗಳಾಗಿರಬೇಕು.

  • ಮೀಸಲಾತಿ: ಮಹಿಳೆಯರಿಗೆ ಶೇ. 33ರಷ್ಟು ಮತ್ತು ಅಂಗವಿಕಲರಿಗೆ ಶೇ. 3ರಷ್ಟು ಮೀಸಲಾತಿ ಲಭ್ಯವಿದೆ.

  • ಇತರೆ ಷರತ್ತುಗಳು: ಈ ಹಿಂದೆ ನಿಗಮದ ಯಾವುದೇ ಸೌಲಭ್ಯವನ್ನು ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಅಗತ್ಯ ದಾಖಲೆಗಳು: ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಯೋಜನಾ ವರದಿ ಹಾಗೂ ಕಡ್ಡಾಯವಾಗಿ ಐಎಫ್‌ಎಸ್‌ಸಿ (IFSC) ಕೋಡ್ ಇರುವ ಬ್ಯಾಂಕ್ ಖಾತೆ ಪಾಸ್‌ಬುಕ್ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅರ್ಜಿದಾರರು ನಿಗಮದ ಅಧಿಕೃತ ವೆಬ್‌ಸೈಟ್ https://kmdconline.karnataka.gov.in/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 16 ಕೊನೆಯ ದಿನಾಂಕವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರತಿ ಮತ್ತು ಅಗತ್ಯ ದಾಖಲೆಗಳನ್ನು ನಿಗಮದ ಕಚೇರಿಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಜಿಲ್ಲೆಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆಗಳಾದ 08392-294370 ಮತ್ತು 8277944207 ಅನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು