DNA ವರದಿಯಲ್ಲಿ ಸತ್ಯ ಬಯಲು
ಪುತ್ತೂರು ಬಿಜೆಪಿ ಮುಖಂಡನ ಪುತ್ರನಾದ ಕೃಷ್ಣ ಜೆ ರಾವ್, ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಮೋಸ ಮಾಡಿದ್ದ. ಯುವತಿ ಕೆಲ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಕೃಷ್ಣ ಜೆ ರಾವ್ ತಾನು ಮಗುವಿನ ತಂದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿ ಪರಾರಿಯಾಗಿದ್ದನು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಪೊಲೀಸರು, ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿ ಕೃಷ್ಣ ಜೆ ರಾವ್‌ನ ರಕ್ತದ ಮಾದರಿಯನ್ನು ಸಂಗ್ರಹಿಸಿ DNA ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇದೀಗ ಬಂದಿರುವ ವರದಿಯಲ್ಲಿ ಕೃಷ್ಣ ಜೆ ರಾವ್ ಅವರೇ ಮಗುವಿನ ತಂದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಕಾನೂನು ಹೋರಾಟ ಬಿಟ್ಟು ಮದುವೆಗೆ ಆಗ್ರಹ
ಸಂತ್ರಸ್ತ ಯುವತಿಯ ಕುಟುಂಬವು ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿತ್ತು. ಈ ಹೋರಾಟಕ್ಕೆ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರೂ ಬೆಂಬಲ ಸೂಚಿಸಿದ್ದರು.
ಸತ್ಯ ಬಯಲಾದ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ಕುಟುಂಬದವರು ಯುವತಿಯನ್ನು ಈಗಲಾದರೂ ಕೃಷ್ಣ ರಾವ್ ಮದುವೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂ ಸಂಘಟನೆಗಳ ಮನವಿ:
ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ವಿಭಿನ್ನ ನಿಲುವು ತಳೆದಿವೆ. "ನಮಗೆ ಕಾನೂನು ಹೋರಾಟ ಇಷ್ಟವಿಲ್ಲ. ಇಬ್ಬರೂ ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದೂತ್ವದ ಭದ್ರ ಕೋಟೆ ಪುತ್ತೂರಿನಲ್ಲಿ, ಹಿಂದೂ ಮುಖಂಡರು ಮುಂದೆ ಬಂದು ಎರಡೂ ಕುಟುಂಬಗಳನ್ನು ಒಂದು ಮಾಡಿ ಮದುವೆ ಮಾಡಿಸಬೇಕು," ಎಂದು ಅವರು ಮನವಿ ಮಾಡಿದ್ದಾರೆ. DNA ವರದಿಯು ಕೃಷ್ಣ ಜೆ ರಾವ್ ಮೇಲೆ ಮತ್ತಷ್ಟು ಕಾನೂನು ಒತ್ತಡವನ್ನು ಹೇರಿದೆ.