ಇಂದು (ಮಂಗಳವಾರ) ನಡೆದ ಮಹತ್ವದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸುವುದಾಗಿ ಘೋಷಿಸಿದರು.
ಸಮರ್ಪಕವಾಗಿ ಪೂರ್ಣಗೊಳ್ಳದ ಸಮೀಕ್ಷಾ ಕಾರ್ಯ
ಕೊಪ್ಪಳ ಜಿಲ್ಲೆಯಲ್ಲಿ ಶೇ.90ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶೇ.68 ರಿಂದ 69ರಷ್ಟು ಮಾತ್ರ ಸಮೀಕ್ಷೆ ಆಗಿದೆ. ಇಡೀ ರಾಜ್ಯದಲ್ಲಿ ನಾವು ನಿರೀಕ್ಷಿಸಿದಷ್ಟು ಸಮೀಕ್ಷೆ ಸಾಧ್ಯವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ಪೂರ್ಣಗೊಂಡಿಲ್ಲ ಎಂಬ ಮಾಹಿತಿ ಬಂದಿದೆ.
ಜಾತಿ ಗಣತಿ ಮುಕ್ತಾಯವಾಗದ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು. ನಿನ್ನೆ ಶಿಕ್ಷಣ ಇಲಾಖೆಯಿಂದ ರಜೆ ವಿಸ್ತರಣೆಗೆ ಸಂಬಂಧಿಸಿದಂತೆ ಒಂದು ಆದೇಶ ಹೊರಡಿಸಲಾಗಿತ್ತು.
ದಸರಾ ರಜೆ ವಿಸ್ತರಣೆ
ಶಿಕ್ಷಕರಿಗೆ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ, ಈ ಹಿಂದೆ ಘೋಷಿಸಿದ್ದ ರಜೆಯನ್ನು ವಿಸ್ತರಿಸಲಾಗಿದೆ. ನಾಳೆಯಿಂದ ಅಕ್ಟೋಬರ್ 8, 9, 10 (ಮೂರು ಕಾರ್ಯದಿನಗಳು) ಮತ್ತು ಅಕ್ಟೋಬರ್ 13 ರಿಂದ 18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಶಿಕ್ಷಕರು ಮತ್ತು ಅಧಿಕಾರಿಗಳು ಈ ಹೆಚ್ಚುವರಿ ಅವಧಿಯನ್ನು ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಬಳಸಿಕೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.
