ಕೊಪ್ಪಳ (Koppal): ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ 'ಕ್ರಾಂತಿ' ಆಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಬಸಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ಯಾವ 'ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ' ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಯಾವುದೇ ಕ್ರಾಂತಿ ಸಂಭವಿಸುವುದಿಲ್ಲ. ಬಿಜೆಪಿ ನಾಯಕರು ಕೇವಲ ಅನಗತ್ಯ ಹೇಳಿಕೆಗಳನ್ನು ನೀಡಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕುರಿತು ಬಿಜೆಪಿ ನಾಯಕರು ಪದೇ ಪದೇ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರ ಈ ಪ್ರತಿಕ್ರಿಯೆ ಮಹತ್ವ ಪಡೆದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆ (Caste Survey) ಕುರಿತು ಮಾತನಾಡಿದ ಸಿಎಂ, ಸಮೀಕ್ಷೆಯ ಕೆಲಸ ಮಂಗಳವಾರಕ್ಕೆ (ನಾಳೆಗೆ) ಮುಗಿಯಲಿದೆ. ಒಂದು ವೇಳೆ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ, ದಿನಾಂಕ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು. ನಾಳೆ ಸಂಜೆಯವರೆಗೆ ಕಾದು ನೋಡುತ್ತೇವೆ ಎಂದು ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಯು ನವೆಂಬರ್ ರಾಜಕೀಯ ಬದಲಾವಣೆಗಳ ಕುರಿತು ಹಬ್ಬಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ.
