ವಿಜಯಪುರ: ಕೆಲವು ವರ್ಷಗಳ ಹಿಂದಿನ ಮಾತು. ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿಯಲ್ಲಿ ರಸಗೊಬ್ಬರ ಕಾರ್ಖಾನೆ ಘೋಷಣೆಯಾಗಿತ್ತು. ಆದರೆ ಅದು ಕಾರ್ಯಾರಂಭಿಸಲೇ ಇಲ್ಲ. ಅದು ದಾವಣಗೆರೆಗೆ ಶಿಫ್ಟ್ ಆಗಿತ್ತು. ಆದರೆ ಈ ಬಾರಿ ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಿಡಗುಂದಿಯಲ್ಲಿ ಫ್ಲ್ಯಾಟ್ ಫ್ಯಾಕ್ಟರಿ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದು ಜನತೆಯಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಸಮಗ್ರ ನೀರಾವರಿ ಯೋಜನೆಗಳಿಗೆ ಶರವೇಗ ನೀಡುವಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಯಶಸ್ವಿಯಾಗಿದ್ದ ಸಚಿವ ಡಾ.ಎಂ.ಬಿ. ಪಾಟೀಲ ಈಗ ಕೈಗಾರಿಕಾ ಖಾತೆ ಕರ್ಣಧಾರತ್ವ ವಹಿಸಿದ್ದು ತವರು ಜಿಲ್ಲೆಗೆ ಹೊಸ ಕೈಗಾರಿಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಲುಲು ಉದ್ಯಮ ಸಮೂಹವನ್ನು ಆಹ್ವಾನಿಸಿ ಆಹಾರೋತ್ಪನ್ನ ಬೃಹತ್ ಘಟಕ ಆರಂಭಿಸುವ ನಿಟ್ಟಿನಲ್ಲಿ ಹಸಿರುನಿಶಾನೆ ಪಡೆದುಕೊಂಡಿರುವ ಡಾ.ಎಂ.ಬಿ. ಪಾಟೀಲರು ಈಗ ನಿಡಗುಂದಿಯಲ್ಲಿ ಹೊಸ ಕೈಗಾರಿಕೋದ್ಯಮ ಸ್ಥಾಪಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಗ್ರೀನ್ ಸಿಗ್ನಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಉದ್ಯೋಗ ಸೃಜನೆಗೆ ದೊಡ್ಡ ಕೊಡುಗೆ ನೀಡಲಿದೆ.
ಆಧುನಿಕ ಸೌಕರ್ಯಗಳೊಂದಿಗೆ ಒಂದೇ ಸೂರಿನಡಿಯಲ್ಲಿ ಕೈಗಾರಿಕೆಗಳು ಕಾರ್ಯಾರಂಭವಾಗುವ ನಿಟ್ಟಿನಲ್ಲಿ ಪೂರಕವಾದ ಯೋಜನೆಯನ್ನು ಬಜೆಟ್‌ನಲ್ಲಿ ಮಂಡಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ವಿಜಯಪುರದಲ್ಲಿದೆ. ಆದರೂ ಸಹ ವಿಜಯಪುರಕ್ಕೆ ಕೈಗಾರಿಕೆಗಳು ಮುಖ ಮಾಡುವುದು ಅಪರೂಪ. ಹೆಲಿಕ್ಯಾಪ್ಟರ್ ಬಿಡಿಭಾಗಗಳ ಕಾರ್ಖಾನೆ, ರಸಗೊಬ್ಬರ ಕಾರ್ಖಾನೆ ಸಹ ವಿಜಯಪುರಕ್ಕೆ ಕೈ ತಪ್ಪಿರುವುದು ಇತಿಹಾಸ. ನಿಡಗುಂದಿಯಲ್ಲಿ ರಸಗೊಬ್ಬರ ಉತ್ಪಾದನಾ ಘಟಕ ಆರಂಭವಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ದಾವಣಗೆರೆಗೆ ಸ್ಥಳಾಂತರವಾಯಿತು. ಈಗ ಸಚಿವ ಡಾ.ಎಂ.ಬಿ. ಪಾಟೀಲರೇ ಕೈಗಾರಿಕಾ ಸಚಿವರಾಗಿರುವುದರಿಂದ ನಿಡಗುಂದಿಯಲ್ಲಿ ಕೈಗಾರಿಕೆ ಖಂಡಿತವಾಗಿಯೂ ಆರಂಭವಾಗಲಿದೆ ಎಂಬ ನಿರೀಕ್ಷೆ ಜನತೆಯಲ್ಲಿ ಮನೆ ಮಾಡಿದೆ.
ಕೈಗಾರಿಕಾ ಸಚಿವರಾದ ನಂತರ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿರುವ ಸಚಿವ ಎಂ.ಬಿ.ಪಾಟೀಲರು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಮಾತುಕತೆ ಸಹ ನಡೆಸಿ ಒಪ್ಪಂದ ಮತ್ತು ಒಡಂಬಡಿಕೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಪ್ರಮುಖ ಕಂಪನಿಗಳಾದ ಎಚ್.ಪಿ, ಲುಲು, ನೆಸ್ಲೆ, ಬಿ.ಎಲ್.ಆಗ್ರೋ, ಎಚ್.ಸಿ.ಎಲ್ ನಂತಹ ಹಲವಾರು ಕಂಪನಿಗಳೊಂದಿಗೆ ಮಾತುಕತೆ ನಡೆಸಿ ರಾಜ್ಯಕ್ಕೆ 22 ಸಾವಿರ ಕೋಟಿ ರೂ. ಹೆಚ್ಚಿನ ಬಂಡವಾಳ ಬರುವುದನ್ನು ಖಾತ್ರಿ ಪಡಿಸಿದ್ದಾರೆ.
ಇನ್ನು ಲುಲು ಕಂಪನಿ ವಿಜಯಪುರದಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ ಆರಂಭಿಸಲು ಒಪ್ಪಿಕೊಂಡಿದೆ. ಉತ್ತರ ಪ್ರದೇಶ ಮೂಲದ ಬಿ.ಎಲ್.ಆಗ್ರೋ ಕಂಪನಿ ಸಹ ಆಹಾರ ಸಂಸ್ಕರಣಾ ಘಟಕ ಆರಂಭಿಸಲು ಮುಂದೆ ಬಂದಿದೆ ಎಂದು ಸಚಿವರೇ ಈ ಹಿಂದೆ ಮಾಹಿತಿ ನೀಡಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಈ ಕಂಪನಿಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದ್ದು ತ್ವರಿತವಾಗಿ ಸಚಿವರ ಈ ಭರವಸೆಗಳು ಈಡೇರಬೇಕಿದೆ.
ಜಿಲ್ಲೆಯಲ್ಲಿ 3239 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಲಾಗಿದ್ದು, ಈ ಪೈಕಿ ಕೊಲ್ಹಾರ ತಾಲೂಕಿನಲ್ಲಿ 245 ಕೋಟಿ ರೂ. ವೆಚ್ಚದಲ್ಲಿ 614 ಎಕರೆ ಪ್ರದೇಶ ಅಭಿವೃದ್ಧಿ ಪಡಿಸಲಾಗಿದೆ ಇದರಲ್ಲಿ ಹೊಸ ಕೈಗಾರಿಕಾ ಸ್ಥಾಪನೆಗೆ 411 ನಿವೇಶನಗಳು ಲಭ್ಯವಿದೆ. ಇಂಡಿ ತಾಲೂಕಿನ ಬೂದಿಹಾಳ ಮತ್ತು ಮುದ್ದೇಬಿಹಾಳ ತಾಲೂಕಿನಲ್ಲಿ ಕ್ರಮವಾಗಿ 19 ಮತ್ತು 6 ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ಸ್ವಾಧೀನದಲ್ಲಿರುವ 1300 ಎಕರೆ ಜಾಗದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲಾಗುತ್ತಿದೆ. ಆದರೆ, ಈ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ.
ಇನ್ನು ಕೈಗಾರಿಕಾ ಪ್ರದೇಶದಲ್ಲಿ ಹಂಚಿಕೆಯಾದ ನಿವೇಶನಗಳಲ್ಲಿ ಬಹುತೇಕ ನಿವೇಶನಗಳು ಖಾಲಿ ಬಿದ್ದಿದ್ದು ಈ ಎಲ್ಲಿ ನಿವೇಶನಗಳಲ್ಲಿ ನಿಗಧಿತ ಅವಧಿಯಲ್ಲಿ ಕೈಗಾರಿಗಳು ಸ್ಥಾಪನೆಯಾಗಬೇಕು ಇಲ್ಲವಾದಲ್ಲಿ ಬೇರೆಯವರಿಗಾದರೂ ಅವಕಾಶ ಕೊಡಬೇಕೆಂಬ ಕೂಗಿದೆ.
ಜವಳಿ ಪಾರ್ಕ ಸ್ಥಾಪನೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಆದರೆ ಇದುವರೆಗೂ ಅದು ಕಾರ್ಯಗತಗೊಂಡಿಲ್ಲ. ಜಿಲ್ಲೆಗೆ ಬರಬೇಕಿದ್ದ ಜವಳಿ ಪಾರ್ಕ ಕಲಬುರಗಿ ಪಾಲಾಗಿದೆ. ಆಹಾರ ಸಂಸ್ಕರಣಾ ಘಟಕ ಜಿಲ್ಲೆಗೆ ಮಂಜೂರಾಗಿತ್ತು ಅದಕ್ಕೆ ತೊರವಿ ಬಳಿ ಸ್ಥಳಾವಕಾಶ ಕೂಡ ಕಲ್ಪಿಸಲಾಗಿತ್ತು ಆದರೆ ಈ ವರೆಗೂ ಅದು ಅನುಷ್ಠಾನಗೊಂಡಿಲ್ಲ.
ಜಿಲ್ಲೆಯಲ್ಲಿ ದ್ರಾಕ್ಷಿ, ಲಿಂಬೆ, ದಾಳಿಂಬೆ ಮತ್ತಿತರ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪೂರಕ ಕೈಗಾರಿಕೆ, ಸಂಸ್ಕರಣಾ ಘಟಕ ಸ್ಥಾಪನೆಯ ಅಗತ್ಯವಿದ್ದು, ಸಕ್ಕರೆ ಕಾರ್ಖಾನೆಗಳಿಗೆ ನೀಡುತ್ತಿರುವ ಸಹಾಯಧನದ ಮಾದರಿಯಲ್ಲಿಯೇ ಆಹಾರ ಸಂಸ್ಕರಣಾ ಘಟಕ, ವೈನ್ ಉದ್ಯಮ ಸೇರಿದಂತೆ ಮತ್ತಿತರ ಕೈಗಾರಿಕೆಗಳಿಗೆ ಆಧ್ಯತೆ ನೀಡಬೇಕಿದೆ.