ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಬಳಿಕ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಿಗೂ ಪಕ್ಷದ ಹೈಕಮಾಂಡ್‌ನಿಂದ ಆಘಾತ ಎದುರಾಗಿದೆ. ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರನ್ನು ಪ್ರಮುಖ ಸ್ಥಾನದಿಂದ ವಜಾಗೊಳಿಸಿ ವರಿಷ್ಠರು ಶಾಕ್ ನೀಡಿದ್ದಾರೆ.
ಶಾಸಕ ರಾಜು ಕಾಗೆ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅವರ ಬದಲಿಗೆ ಅರುಣ್ ಪಾಟೀಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ಪಟ್ಟಿ ರವಾನಿಸಿದ್ದಾರೆ.
ಪಕ್ಷ ವಿರೋಧಿ ಹೇಳಿಕೆಗಳೇ ವಜಾಗೆ ಕಾರಣ?:
ಸರ್ಕಾರದ ವಿರುದ್ಧ ಮತ್ತು ಪಕ್ಷದ ನಾಯಕರ ವಿರುದ್ಧ ನೇರವಾಗಿ ಮಾತನಾಡುತ್ತಿದ್ದ ಶಾಸಕರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಈ ಮೂಲಕ ಕಠಿಣ ಸಂದೇಶ ರವಾನಿಸಿದೆ ಎನ್ನಲಾಗಿದೆ. ಇತ್ತೀಚೆಗೆ ರಾಜು ಕಾಗೆ ಅವರು ನೀಡಿದ್ದ ಹೇಳಿಕೆಗಳೇ ಅವರ ಈ ಸ್ಥಾನ ಕಳೆದುಕೊಳ್ಳಲು ಮುಖ್ಯ ಕಾರಣ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ:
ಸಚಿವ ಕೆ.ಎನ್. ರಾಜಣ್ಣ ಅವರ ನಂತರ ರಾಜು ಕಾಗೆ ಅವರ ವಜಾ, ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಶಾಸಕರಿಗೆ ಹೈಕಮಾಂಡ್‌ನಿಂದ ನೀಡಿರುವ ಸ್ಪಷ್ಟ ಮತ್ತು ಖಡಕ್ ಎಚ್ಚರಿಕೆಯಾಗಿದೆ. ಸರ್ಕಾರದ ಆಡಳಿತ ಮತ್ತು ಪಕ್ಷದ ನಾಯಕರ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುವುದು ಇನ್ನು ಮುಂದೆ ಸಹಿಸಲಾಗದು ಎಂಬ ಸೂಚನೆಯನ್ನು ಇದು ನೀಡಿದೆ. ಈ ಕ್ರಮವು ಕರ್ನಾಟಕ ಕಾಂಗ್ರೆಸ್‌ನಲ್ಲಿ ಶಿಸ್ತಿನ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನು ತೋರಿಸುತ್ತದೆ.
