ಸೀರೆ ಕಳ್ಳತನ: ಮಹಿಳೆಗೆ ಅಮಾನುಷ ಹಲ್ಲೆ; ಅಂಗಡಿ ಮಾಲೀಕ ಬಂಧನ

ಬೆಂಗಳೂರು: ಸೀರೆ ಕದ್ದ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿ ಅಮಾನುಷ ಕ್ರೌರ್ಯ ಮೆರೆದಿದ್ದ ಬಟ್ಟೆ ಅಂಗಡಿ ಮಾಲೀಕನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಮೇದ್ ರಾಮ್ ಎಂದು ಗುರುತಿಸಲಾಗಿದೆ. ಈ ಅಮಾನವೀಯ ಘಟನೆ ಸಂಬಂಧ ಕೆ.ಆರ್. ಮಾರ್ಕೆಟ್ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಘಟನೆ ಹಿನ್ನಲೆ:

ಹಂಪಮ್ಮ ಎಂಬ ಮಹಿಳೆ 50ಕ್ಕೂ ಹೆಚ್ಚು ಸೀರೆಗಳನ್ನು ಕದ್ದಿದ್ದಾಳೆ ಎಂದು ಆರೋಪಿಸಿ ಅಂಗಡಿ ಮಾಲೀಕ ಮತ್ತು ಆತನ ಸಿಬ್ಬಂದಿ ಸೇರಿ ಆಕೆಗೆ ನಿರ್ದಯವಾಗಿ ಹಲ್ಲೆ ನಡೆಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ, ಮಾಲೀಕ ಮತ್ತು ಆತನ ಸಿಬ್ಬಂದಿ ಮಹಿಳೆಗೆ ಒದ್ದು, ಮನಬಂದಂತೆ ಥಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಾಲೀಕ ಹಗಲು ಹೊತ್ತಿನಲ್ಲಿ ಮಹಿಳೆಯ ಗುಪ್ತಾಂಗಕ್ಕೆ ತನ್ನ ಶೂನಿಂದ ಒದ್ದು ಅಮಾನುಷವಾಗಿ ವರ್ತಿಸಿದ್ದಾನೆ. ಮಹಿಳೆ ನೋವಿನಿಂದ ನರಳುತ್ತಿದ್ದರೂ ಕಿಂಚಿತ್ತೂ ಕರುಣೆ ತೋರದೆ, ರಾಕ್ಷಸರಂತೆ ವರ್ತಿಸಿದ್ದು, ಈ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಪೊಲೀಸರ ನಡೆಗೆ ವ್ಯಾಪಕ ಖಂಡನೆ

ಈ ಘಟನೆಯಲ್ಲಿ ಕೆ.ಆರ್. ಮಾರ್ಕೆಟ್ ಪೊಲೀಸರ ನಡವಳಿಕೆ ಇನ್ನಷ್ಟು ಆಘಾತಕಾರಿಯಾಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ರಕ್ಷಿಸಿ ನ್ಯಾಯ ಒದಗಿಸುವ ಬದಲು, ಪೊಲೀಸರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯ ದೂರು ದಾಖಲಿಸಿಕೊಳ್ಳುವ ಬದಲು, ಅಂಗಡಿ ಮಾಲೀಕರ ಪರವಾಗಿ ನಿಂತು, ಆಕೆಯ ಮೇಲೆ ಕಳ್ಳತನದ ಆರೋಪದಡಿ ಪ್ರಕರಣ ದಾಖಲಿಸಿ, ಸರಿಯಾದ ತನಿಖೆ ನಡೆಸದೆ ಜೈಲಿಗೆ ಕಳುಹಿಸಿದ್ದರು ಎನ್ನಲಾಗಿದೆ. ವಿಡಿಯೋ ವೈರಲ್ ಆದ ನಂತರ ಮತ್ತು ಸಾರ್ವಜನಿಕ ಆಕ್ರೋಶ ಹೆಚ್ಚಾದ ನಂತರವಷ್ಟೇ ಪೊಲೀಸರು ಕ್ರಮ ಕೈಗೊಂಡು ಮಾಲೀಕನನ್ನು ಬಂಧಿಸಿದ್ದಾರೆ.

ಪೊಲೀಸರ ಈ ನಿರ್ಲಕ್ಷ್ಯ ಮತ್ತು ದೌರ್ಜನ್ಯದ ಬಗ್ಗೆ ಕರ್ನಾಟಕದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಘಟನೆಯು ಕೇವಲ ಕಳ್ಳತನದ ಆರೋಪಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಕಾನೂನನ್ನು ಕೈಗೆತ್ತಿಕೊಂಡಿರುವ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಅಮಾನವೀಯ ಕೃತ್ಯವಾಗಿದೆ.


ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 👇

https://x.com/karnatakaportf/status/1971265788393955442

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು