ಕಾಸರಗೋಡು: ಕೇರಳದ ಚೆಂಗಳ ನಾಲ್ಕನೇ ಮೈಲ್ ಬಳಿ ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಮೃತಪಟ್ಟಿದ್ದಾರೆ.
ಮೃತರನ್ನು ಚೇರ್ವತ್ತೂರು ಮಾಯಿಚ್ಚಿ ನಿವಾಸಿ ಸಜಿತ್ (38) ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಇವರ ಜೊತೆಗಿದ್ದ ಸಿವಿಲ್ ಪೊಲೀಸ್ ಅಧಿಕಾರಿ ಸುಭಾಶ್ಚಂದ್ರನ್ ಕೂಡ ಗಾಯಗೊಂಡಿದ್ದಾರೆ.
ತನಿಖೆ ವೇಳೆ ದುರಂತ
ಕಾನ್‌ಸ್ಟೇಬಲ್ ಸಜಿತ್ ಅವರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಮಾದಕ ದ್ರವ್ಯ ಮಾರಾಟದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ, ಅದರ ಜಾಡು ಹಿಡಿದು ತನಿಖೆ ನಡೆಸಲು ಪೊಲೀಸ್ ವಾಹನವನ್ನು ಬಿಟ್ಟು ಖಾಸಗಿ ಕಾರಿನಲ್ಲಿ ಸಜಿತ್ ಮತ್ತು ಸುಭಾಶ್ಚಂದ್ರನ್ ತೆರಳಿದ್ದರು. ಈ ಸಂದರ್ಭದಲ್ಲಿಯೇ ದುರದೃಷ್ಟಕರ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಜಿತ್ ಅವರನ್ನು ತಕ್ಷಣವೇ ಚೆಂಗಳದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.