ಹಾಸ್ಟೇಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಸೀಮಾ ರಾಥೋಡ್ (17) ಎಂದು ಗುರುತಿಸಲಾಗಿದೆ. ಬಾಗಲಕೋಟೆ ನಗರದ ವಿದ್ಯಗಿರಿಯಲ್ಲಿರುವ ಹಾಸ್ಟೆಲ್‌ನಲ್ಲಿ ಈ ದುರದೃಷ್ಟಕರ ಘಟನೆ ನಡೆದಿದೆ.

ಸಾವಿನ ಬಗ್ಗೆ ಪೋಷಕರಿಗೆ ಗೊಂದಲದ ಕರೆ

ವಾಗ್ದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸೀಮಾ, ಕಾಲೇಜಿಗೆ ಸೇರಿದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು. ನಿನ್ನೆ ಸಂಜೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನೇಣು ಬಿಗಿದ ಸ್ಥಿತಿ ಕಂಡು ಹಾಸ್ಟೆಲ್‌ನ ಇತರ ವಿದ್ಯಾರ್ಥಿನಿಯರು ಹೆದರಿ ಹೊರ ಬಂದಿದ್ದಾರೆ.

ಘಟನೆಯ ಬಳಿಕ, ಹಾಸ್ಟೆಲ್‌ನಿಂದ ಸೀಮಾ ಅವರ ಪೋಷಕರಿಗೆ ಕರೆ ಹೋಗಿದೆ. ಮೊದಲು, "ನಿಮ್ಮ ಮಗಳಿಗೆ ಪಿಟ್ಸ್ ಬಂದಿದೆ" ಎಂದು ತಿಳಿಸಲಾಗಿದೆ. ಸ್ವಲ್ಪ ಸಮಯದ ನಂತರ, "ಈಗ ನೇಣು ಹಾಕಿಕೊಂಡಿದ್ದಾಳೆ" ಎಂದು ಹೇಳಿದ್ದಾರೆ ಎಂದು ಪೋಷಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಗೊಂದಲದ ಕರೆಗಳಿಂದಾಗಿ, ತಮ್ಮ ಮಗಳ ಸಾವಿನ ಬಗ್ಗೆ ಪೋಷಕರಿಗೆ ತೀವ್ರ ಅನುಮಾನ ವ್ಯಕ್ತವಾಗಿದೆ.

ಪೋಷಕರಿಂದ ತೀವ್ರ ತನಿಖೆಗೆ ಆಗ್ರಹ

ಸೀಮಾ ರಾಥೋಡ್ ಸಾವು ಸಹಜವಾದುದಲ್ಲ, ಇದರಲ್ಲಿ ಅನುಮಾನಾಸ್ಪದ ಅಂಶಗಳಿವೆ ಎಂದು ಆರೋಪಿಸಿರುವ ಪೋಷಕರು, ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸದ್ಯ ನವನಗರ ಠಾಣೆ ಪೊಲೀಸರು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವಿದ್ಯಾರ್ಥಿನಿಯ ಸಾವಿಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು