ಮುಗ್ಧ ಜನತೆ ಮೇಲೆ ಸೈಬರ್ ಕಳ್ಳರ `ಟ್ರಿಗರ್': 4,664 ಕೋಟಿ ರೂ. ಎಗರಿಸಿದ ಸೈಬರ್ ಖದೀಮರು!

ಬೆಂಗಳೂರು: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸೈಬರ್ ವಂಚನೆಯಿಂದ ಜನತೆ ಕಳೆದುಕೊಂಡ ಹಣ ಭರ್ತಿ 4,664 ಕೋಟಿ ರೂ.! ಸೈಬರ್ ವಂಚನೆಗಳ ಕುರಿತು ದಾಖಲಾಗಿರುವ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕೂ ಅಧಿಕ...!!

ಸೈಬರ್ ವಂಚನೆಯ ಜಾಲ ಕರ್ನಾಟಕದಲ್ಲಿಯೇ ವ್ಯಾಪಕವಾಗಿ ಬೇರೂರಿದ್ದು ಕರುನಾಡಿನ ಅಮಾಯಕ ಜನರಿಗೆ ಮೋಸ ಮಾಡುವ ರಣವ್ಯೂಹವನ್ನು ಸೈಬರ್ ಕಳ್ಳರ ಜಾಲ ಕರ್ನಾಟಕದಲ್ಲಿ ಬೀಸಿದೆ. ವಂಚನೆಯಾಗಿರುವ ಮೊತ್ತದ ಹಣ ಕೇಳಿದಾಗ ಎಂತಹವರಿಗೂ ಶಾಕ್ ಆಗುವುದು ಸಹಜ....

2023 ರಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ 22253 ಪ್ರಕರಣಗಳು ದಾಖಲಾಗಿದ್ದು ಈ ಪ್ರಕರಣಗಳಲ್ಲಿ ಸರಿಸುಮಾರು 1,287 ಕೋಟಿ ರೂ.ಗೂ ಅಧಿಕ ವಂಚನೆ, 2024 ರಲ್ಲಿ 22,472 ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ  2,513 ಕೋಟಿ ರೂ.ಗೂ ಅಧಿಕ ಹಾಗೂ ಪ್ರಸಕ್ತ ವರ್ಷದಲ್ಲಿ 8620 ಪ್ರಕರಣಗಳು ದಾಖಲಾಗಿದ್ದು 861 ಕೋಟಿ ರೂ.ಗೂ ಅಧಿಕ ಮೊತ್ತದ ಹಣ ವಂಚನೆಯಾಗಿರುವುದು ಖಚಿತ ಮೂಲಗಳಿಂದ ತಿಳಿದುಬಂದಿದೆ.

ಕೇವಲ 9,264 ಇತ್ಯರ್ಥ – 44,081 ಬಾಕಿ

ಮೂರು ವರ್ಷಗಳ ಅವಧಿಯಲ್ಲಿ ಪತ್ತೆ ಹಚ್ಚಲಾದ ಪ್ರಕರಣಗಳ ಸಂಖ್ಯೆ ಕೇವಲ ಶೇ.20 ರಷ್ಟು. ದಾಖಲಾದ ಒಟ್ಟು ಪ್ರಕರಣಗಳ ಪೈಕಿ 9,264 ಪ್ರಕರಣಗಳು ಮಾತ್ರ ಇತ್ಯರ್ಥವಾಗಿದ್ದು, ಬಾಕಿ ಇರುವ ಪ್ರಕರಣ ಸಂಖ್ಯೆ 44,081 ಆಗಿರುವುದು ಆತಂಕಕಾರಿ ಸಂಗತಿ.

ಈ ಪ್ರಕರಣಗಳ ಪೈಕಿ 2022 ರಲ್ಲಿ 6007 ಪ್ರಕರಣ, 2024 ರಲ್ಲಿ 2858 ಪ್ರಕರಣ ಹಾಗೂ ಪ್ರಸಕ್ತ ವರ್ಷದಲ್ಲಿ 399 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಪ್ರಸಕ್ತ ವರ್ಷ ಸರಿಸುಮಾರು 172 ಕೋಟಿ ರೂ. ಹಣವನ್ನು ರಿಕವರಿ ಮಾಡಲಾಗಿದೆ.

ಸೈಬರ್ ಅಪರಾಧ ಎನ್ನವುದು ಗೃಹ ಇಲಾಖೆಗೆ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಸವಾಲಾಗಿದೆ, ಯಾರು ಎಲ್ಲಿ ಕುಳಿತು ಆಪರೇಟ್ ಮಾಡುತ್ತಾರೋ ಎಂಬುದು ತಿಳಿಯದಾಗಿದೆ, ನಮ್ಮ ಅಕೌಂಟ್‌ನಲ್ಲಿರುವ ಹಣ ಸೇಫ್ ಆಗಿ ಉಳಿದಿದೆಯೋ ಇಲ್ಲದಂತಹ ಪರಿಸ್ಥಿತಿ ಸೃಜನೆಯಾಗಿದೆ ಎಂಬ ಆತಂಕವನ್ನು ಸ್ವತ: ಗೃಹ ಸಚಿವ ಡಾ.ಜಿ. ಪರಮೇಶ್ವರ ಶಾಸನಸಭೆಯಲ್ಲಿ ವ್ಯಕ್ತಪಡಿಸಿದ್ದು ನೋಡಿದರೆ ಸೈಬರ್ ಕಳ್ಳರು ಸರ್ಕಾರಕ್ಕೂ ದೊಡ್ಡ ತಲೆ ನೋವಾಗಿರುವುದರಲ್ಲಿ ಎರಡು ಮಾತಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು