ಧರ್ಮಸ್ಥಳ ಬುರುಡೆ ಪ್ರಕರಣ: ನಾಪತ್ತೆಯಾಗಿದ್ದ ತುಮಕೂರಿನ ಯುವಕನ ಡಿಎಲ್ ಪತ್ತೆ

ಬೆಳ್ತಂಗಡಿ: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ (Dharmasthala Skeleton Case) ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಎಸ್‌ಐಟಿ (SIT) ತನಿಖೆಯಲ್ಲಿ ಮತ್ತೊಂದು ಮಹತ್ವದ ಸುಳಿವು ಪತ್ತೆಯಾಗಿದೆ. ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ, ಮಡಿಕೇರಿ ಮೂಲದ ವ್ಯಕ್ತಿಯ ಐಡಿ ಕಾರ್ಡ್ ಜೊತೆಗೆ ಇದೀಗ ಡ್ರೈವಿಂಗ್ ಲೈಸೆನ್ಸ್ (DL) ಒಂದು ಸಿಕ್ಕಿದೆ.

ಪತ್ತೆಯಾದ ಈ ಡಿಎಲ್ ಆದಿಶೇಷ ನಾರಾಯಣ ಎಂಬ ವ್ಯಕ್ತಿಗೆ ಸೇರಿದ್ದಾಗಿದ್ದು, ಆತ ತುಮಕೂರು ಮೂಲದವನು ಎಂದು ತಿಳಿದುಬಂದಿದೆ.

ಆದಿಶೇಷ ಕುಟುಂಬಕ್ಕೆ ಎಸ್‌ಐಟಿ ಬುಲಾವ್

ಪತ್ತೆಯಾದ ಡಿಎಲ್ ಆಧರಿಸಿ, ಎಸ್‌ಐಟಿ ಅಧಿಕಾರಿಗಳು ತುಮಕೂರು ಮೂಲದ ಕುಟುಂಬಕ್ಕೆ ತುರ್ತು ಬುಲಾವ್ ನೀಡಿದ್ದಾರೆ. ತುಮಕೂರು ಜಿಲ್ಲೆಯ ದಾಸರಕಲ್ಲಹಳ್ಳಿ ನಿವಾಸಿಯಾದ ಆದಿಶೇಷ ನಾರಾಯಣನ ಸಹೋದರಿಯರು ಮತ್ತು ಭಾವ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.

ಸಹೋದರಿಯರಾದ ಲಕ್ಷ್ಮಿ ಮತ್ತು ಪದ್ಮ ಹಾಗೂ ಬಾವ ಶಿವಕುಮಾರ್ ಅವರು ಆಗಮಿಸಿ ಡಿಎಲ್ ಅನ್ನು ಪರಿಶೀಲಿಸಿದರು. ಪತ್ತೆಯಾದ ಡ್ರೈವಿಂಗ್ ಲೈಸೆನ್ಸ್ ನಾಪತ್ತೆಯಾದ ಆದಿಶೇಷ ನಾರಾಯಣನದೇ ಎಂದು ಸಂಬಂಧಿಕರು ದೃಢಪಡಿಸಿದ್ದಾರೆ.

ಪತ್ತೆಯಾದ ಅಸ್ಥಿಪಂಜರವು (Skeleton) ಆದಿಶೇಷ ನಾರಾಯಣನದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ (DNA Test) ನಡೆಸಲು ಎಸ್‌ಐಟಿ ಅಧಿಕಾರಿಗಳು ಕುಟುಂಬಸ್ಥರಿಗೆ ಸೂಚಿಸಿದ್ದಾರೆ.

12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ

ಆದಿಶೇಷ ನಾರಾಯಣ ದಾಸರಕಲ್ಲಹಳ್ಳಿಯ ಬೋಜಪ್ಪ ಮತ್ತು ಚೆನ್ನಮ್ಮ ದಂಪತಿಯ ಮೂರನೇ ಪುತ್ರ. ಈತ ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು. ಆದಿಶೇಷ ನಾರಾಯಣ ಸುಮಾರು 12 ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2, 2013 ರಂದು ನಾಪತ್ತೆಯಾಗಿದ್ದನು ಎಂದು ತಿಳಿದುಬಂದಿದೆ.

ಈ ಡಿಎಲ್ ಪತ್ತೆ ಮತ್ತು ಕುಟುಂಬದ ದೃಢೀಕರಣವು, ಬಂಗ್ಲೆ ಗುಡ್ಡದಲ್ಲಿ ಸಿಕ್ಕಿದ್ದ ಅಸ್ಥಿಪಂಜರಗಳ ರಹಸ್ಯವನ್ನು ಭೇದಿಸಲು ಎಸ್‌ಐಟಿಗೆ ಮಹತ್ವದ ಸುಳಿವು ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು