ರೇಣುಕಾಸ್ವಾಮಿ ಕೊಲೆ ಪ್ರಕರಣ: ಅರ್ಜಿಯ ವಿಚಾರಣೆ ಅ.9ಕ್ಕೆ ಮುಂದೂಡಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ಇದೀಗ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ 57ನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ, ಜೈಲಿನಲ್ಲಿ ಹಾಸಿಗೆ ಮತ್ತು ದಿಂಬು ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಜೈಲು ಅಧಿಕಾರಿಗಳ ವಿರುದ್ಧ ದರ್ಶನ್‌ರಿಂದ ದೂರು

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಆರೋಪಿ ದರ್ಶನ್ ಅವರು ಖುದ್ದು ಹಾಜರಾಗಿದ್ದರು. ದರ್ಶನ್ ಪರವಾಗಿ ವಕೀಲ ಸುನೀಲ್ ಅವರು ವಾದ ಮಂಡಿಸಿದರು. ಜೈಲು ಅಧಿಕಾರಿಗಳ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಯಿತು.

ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ವಕೀಲರು ತಿಳಿಸಿದರು. "ಜೈಲಿನ ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಪಾಲಿಸುತ್ತಿಲ್ಲ," ಎಂದು ವಾದಿಸಲಾಯಿತು.

ದರ್ಶನ್ ಮತ್ತು ವಕೀಲರ ಆರೋಪಗಳು

ಈ ವೇಳೆ, ನ್ಯಾಯಾಧೀಶರು ನೇರವಾಗಿ, "ಕೊಲೆ ಆರೋಪಿ ದರ್ಶನ್‌ಗೆ ಜಡ್ಜ್ ಆದೇಶ ಪಾಲಿಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದರು.

ಆಗ ದರ್ಶನ್ ಅವರೇ ನ್ಯಾಯಾಧೀಶರಿಗೆ ನೇರವಾಗಿ ಉತ್ತರಿಸುತ್ತಾ, "ಇಲ್ಲ ಸರ್, ಯಾವ ಆದೇಶಗಳನ್ನೂ ಪಾಲಿಸುತ್ತಿಲ್ಲ. ಓಡಾಡಲು ಕೇವಲ 25/3 ಅಡಿ ಜಾಗದಲ್ಲಿ ಮಾತ್ರ ಅವಕಾಶ ಕೊಟ್ಟಿದ್ದಾರೆ. ವಾಕಿಂಗ್ ಮಾಡಲು ಮತ್ತು ಸೂರ್ಯನ ಬೆಳಕು (Sunlight) ಸಹ ಸರಿಯಾಗಿ ಬರುತ್ತಿಲ್ಲ," ಎಂದು ತಿಳಿಸಿದರು.

  • ದರ್ಶನ್ ಪರ ವಕೀಲರು, ಆರೋಪಿಗಳನ್ನು ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್ ಮಾಡುವಂತೆ ಬಲವಾಗಿ ವಾದ ಮಂಡಿಸಿ ಮನವಿ ಮಾಡಿದರು.

  • "ಜೈಲು ಅಧಿಕಾರಿಗಳು 20 ಬಾರಿ ಕೋರ್ಟ್ ಆರ್ಡರ್ ಕೇಳುತ್ತಾರೆ. ಇದು ಗುಂಡಾರಾಜ್ಯವೇ? ಕೋರ್ಟ್ ಆದೇಶಗಳಿಗೆ ಮಾನ್ಯತೆ ನೀಡುತ್ತಿಲ್ಲ" ಎಂದು ವಕೀಲರು ಜೈಲು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಪವಿತ್ರಾ ಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿ ಆದೇಶ ನೀಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು