ಉಡುಪಿ: ರಾಜ್ಯದಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದ್ದು, ಉಡುಪಿ ತಾಲೂಕಿನ ಕೊಡವೂರು ಸಮೀಪ ಹಾಡಹಗಲೇ ಮನೆಗೆ ನುಗ್ಗಿ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಸೌಫುದ್ದೀನ್ ಎಂದು ಗುರುತಿಸಲಾಗಿದೆ. ಸೌಫುದ್ದೀನ್ ರೌಡಿಶೀಟರ್ ಆಗಿದ್ದು, ಜೊತೆಗೆ ಖಾಸಗಿ ಬಸ್ ಮಾಲೀಕನೂ ಆಗಿದ್ದ. ಮಣಿಪಾಲ ನಿವಾಸಿಯಾದ ಸೌಫುದ್ದೀನ್‌ನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.
ಕೃತ್ಯ ನಡೆಸಿದ ನಂತರ ದುಷ್ಕರ್ಮಿಗಳು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಉಡುಪಿ ಜನತೆಯಲ್ಲಿ ಆತಂಕ ಮೂಡಿಸಿದೆ. ಕೊಲೆಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ, ಆದರೆ ಹಳೇ ದ್ವೇಷ ಅಥವಾ ವೈಯಕ್ತಿಕ ಕಾರಣಗಳು ಇದರ ಹಿಂದೆ ಇರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದಾರೆ.
