ಗದಗ: ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಯ ಪ್ರಕರಣಗಳು ಮುಂದುವರಿದಿದ್ದು, ಇದೀಗ ಗದಗದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ನಾಯಿಗಳು ಭೀಕರ ದಾಳಿ ನಡೆಸಿವೆ. ಈ ದಾಳಿಯಿಂದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಾಯಗೊಂಡ ಬಾಲಕಿಯನ್ನು ಶ್ರೇಯ (7) ಎಂದು ಗುರುತಿಸಲಾಗಿದೆ.
ಬಸ್ ನಿಲ್ದಾಣದ ಬಳಿ ಘಟನೆ, ಗಂಭೀರ ಗಾಯ
ಈ ಘಟನೆ ಗದಗ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಡೆದಿದೆ. ಏಳು ವರ್ಷದ ಶ್ರೇಯಳು ಆಟೋದಿಂದ ಇಳಿದು ಮನೆಗೆ ಹೋಗುತ್ತಿದ್ದಾಗ, ಬೀದಿ ನಾಯಿಗಳ ಗುಂಪು ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದೆ. ನಾಯಿಗಳು ಬಾಲಕಿಯ ತಲೆ, ಕಣ್ಣು, ಮುಖ ಮತ್ತು ಕೈಕಾಲುಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.
ನಾಯಿಗಳ ದಾಳಿಯಿಂದ ಶ್ರೇಯ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ತಕ್ಷಣವೇ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಸದ್ಯ ಬಾಲಕಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಗರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎಂಬ ಆಕ್ರೋಶ ಗದಗಿನ ನಾಗರಿಕರಲ್ಲಿ ವ್ಯಕ್ತವಾಗಿದೆ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
