ಬಿಡದಿ ಸಮೀಪದ 35 ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್ ಬಾಸ್ ಸೀಸನ್ 12ರ ಸೆಟ್‌ಗಳನ್ನು ಹಾಕಿ ಶೋ ನಡೆಸಲಾಗುತ್ತಿತ್ತು. ಆದರೆ, ಸ್ಟುಡಿಯೋವು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದೆ ಎನ್ನಲಾಗಿದೆ.
ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ನಿಯಮಗಳನ್ನು ಉಲ್ಲಂಘಿಸಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೋಟಿಸ್ ಜಾರಿ ಮಾಡಿತ್ತು. ಬಿಗ್ ಬಾಸ್ ಶೋ ನಡೆಸಲು ಸ್ಟುಡಿಯೋ ಆಗಲಿ, ಶೋ ತಂಡವಾಗಲಿ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಕಾರ್ಯಕ್ರಮವನ್ನು ಅನಧಿಕೃತವಾಗಿ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳಿಂದ ಬೀಗಮುದ್ರೆ ಮತ್ತು ಶೋ ಸ್ಥಗಿತ
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಶೋ ಸ್ಥಗಿತಗೊಳಿಸುವಂತೆ ಪೊಲೀಸರು ಸಹ ನೋಟಿಸ್ ಜಾರಿ ಮಾಡಿದ್ದರು. ಆದರೆ, ಜಾಲಿವುಡ್ ಸ್ಟುಡಿಯೋಸ್ ಅಥವಾ ಬಿಗ್ ಬಾಸ್ ಶೋ ತಂಡ ನೋಟಿಸ್ ಸ್ವೀಕರಿಸಲು ನಿರಾಕರಿಸಿದ ಕಾರಣ, ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾದರು.
ಬಿಡದಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಜಾಲಿವುಡ್ ಸ್ಟುಡಿಯೋಸ್ ಮತ್ತು ಬಿಗ್ ಬಾಸ್ ಶೋ ಹೌಸ್‌ಗೆ ಬೀಗ ಜಡಿಯಲಾಗಿದೆ. ಇದರ ಪರಿಣಾಮವಾಗಿ, ಸ್ಪರ್ಧಿಗಳನ್ನು ಸ್ಥಳದಿಂದ ಹೊರ ಕಳುಹಿಸಲಾಗಿದ್ದು, ಬಿಗ್ ಬಾಸ್ ಕಾರ್ಯಕ್ರಮ ಸದ್ಯಕ್ಕೆ ಸ್ಥಗಿತಗೊಂಡಿದೆ.
