ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಜನಿಸಿ ಸಿಂದಗಿ ಸಮೀಪವಿರುವ ಚಿಕ್ಕಸಿಂದಗಿಯಲ್ಲಿ ನೆಲೆಸಿ ತನ್ನ `ಡೈಲಾಗ್' ಮೂಲಕವೇ ಅಭಿಮಾನಿಗಳ ಪ್ರೀತಿ ಗಳಿಸಿ `ಸ್ಯಾಂಡಲ್ವುಡ್'ನಲ್ಲಿ ಮಿಂಚಿದ ಕಲಿಯುಗದ ಕುಡುಕ ರಾಜು ತಾಳಿಕೋಟಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ರಂಗಭೂಮಿ, ಚಿತ್ರರಂಗ ಎರಡಲ್ಲೂ ಜವಾರಿ ಡೈಲಾಗ್ ಹಾಗೂ ಜವಾರಿ ನಟನೆಯ ಮೂಲಕ ಅಭಿಮಾನ ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ತಾಳಿಕೋಟೆಯಲ್ಲಿ 18-12-1945ರಲ್ಲಿ ಜನಿಸಿದ ರಾಜೇಸಾಬ ಮುಕ್ತುಂಸಾಬ್ ತಾಳಿಕೋಟೆ ನಂತರ ಚಿಕ್ಕಸಿಂದಗಿಯಲ್ಲಿ ನೆಲೆಸಿ ಬದುಕು ಕಂಡುಕೊಂಡವರು.
ಮನೆಯಲ್ಲಿ ಕಿತ್ತು ತಿನ್ನುವ ಬಡತನ ರಾಜು ತಾಳಿಕೋಟೆ ಅವರಿಗೆ ನೋವಿನ ಪಾಠ ಕಲಿಸಿತು, ಪಾರ್ಶ್ವವಾಯು ಪೀಡಿತ ತಂದೆ, ಕ್ಯಾನ್ಸರ್ ಪೀಡಿತ ತಾಯಿಯನ್ನು ಸಲುಹಲು ರಾಜು ತಾಳಿಕೋಟೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೋಟೆಲ್ನಲ್ಲಿ ಮಾಣಿಯಾಗಿ, ಲಾರಿ ಕ್ಲೀನರ್ ಆಗಿ ಕೆಲಸ ಮಾಡಬೇಕಾಯಿತು. ವಿವಿಧ ನಾಟಕ ಕಂಪನಿಗಳಲ್ಲಿ ಗೇಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದುಂಟು.
`ತಾಳಿ ತಕರಾರು' ಎಂಬ ನಾಟಕ ಪ್ರದರ್ಶನಕ್ಕೆನ ಸಜ್ಜಾಗಿತ್ತು. ಆದರೆ ಅದರಲ್ಲಿ ಕಿವುಡನ ಪಾತ್ರ ಮಾಡಬೇಕಾದ ಹಿರಿಯ ನಟರು ಗೈರಾಗಿದ್ದರು, ಈ ಪಾತ್ರವಿಲ್ಲದೇ ನಾಟಕಕ್ಕೆ ಜೀವವೇ ಇಲ್ಲ. ಹೀಗಾಗಿ ಆಕಸ್ಮಿಕವಾಗಿ ಅದರಲ್ಲಿ ಪಾರ್ಟ್ ಮಾಡಿದರು.
ಕಣ್ಣಿದ್ದರೂ ಬುದ್ಧಿ ಬೇಕು, ಹೂವಿನ ಅಂಗಡಿ, ದೇವರಿಗೆ ನೆನಪಿಲ್ಲ, ಕಾಲು ಕೆದರಿದ ಹೆಣ್ಣು, ಹಸಿರು ಬಳೆ, ಸೈನಿಕ ಸಹೋದರಿ, ಮನೆಗೆ ಬಂದ ಮಹಾಲಕ್ಷ್ಮೀ, ಕುಡಗೋಲು ನುಂಗಬ್ಯಾಡ್ರೀ ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.
ನಂತರ ಕಲಾ ದಿಗ್ಗಜರಾದ ದಿ.ಸುಧೀರ್ ಅವರೊಂದಿಗೆ ಸಿಂಧೂರ ಲಕ್ಷ್ಮಣ, ಖ್ಯಾತ ಕಲಾವಿದೆ ಉಮಾಶ್ರೀ ಅವರೊಂದಿಗೆ `ಬಸ್ ಕಂಡಕ್ಟರ್', ಸೊಸೆ ಹಾಕಿದ ಸವಾಲು ಸೇರಿದಂತೆ ಅನೇಕ ನಾಟಕಗಳಲ್ಲಿ ಅಭಿನಯಿಸಿದರು.
ತಾಳಿಕೋಟೆಯವರ ಪ್ರಸಿದ್ಧ `ಕಲಿಯುಗದ ಕುಡುಕ' ಅವರಿಗೆ ಹೆಸರು ತಂದುಕೊಡುವ ಜೊತೆಗೆ ರಾಜು ತಾಳಿಕೋಟೆಯವರ ಮುಂದೆ `ಕಲಿಯುಗದ ಕುಡುಕ' ಎನ್ನುವ ಅಡ್ಡ ಹೆಸರೇ ಬರುವ ಮಟ್ಟಿಗೆ ಆ ನಾಟಕ ಜನಪ್ರಿಯತೆ ಪಡೆದುಕೊಂಡಿದ್ದು, 40 ಸಾವಿರಕ್ಕೂ ಹೆಚ್ಚು ಪ್ರಯೋಗ ಕಂಡಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ.
