ನಕ್ಸಲೆಟ್ ಸ್ವಾಮಿಗಳು ಸಿದ್ದರಾಮಯ್ಯ, ಡಿಕೆ ಶಿ ಮನೆಯಲ್ಲಿರುತ್ತಾರೆ: ಶಾಸಕ ಯತ್ನಾಳ್

ಚಿಕ್ಕಬಳ್ಳಾಪುರ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮತ್ತು ಕೆಲವು ಸ್ವಾಮೀಜಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಅಭಿಯಾನದ ಹಿಂದಿನ ಶಕ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬೆಂಬಲದೊಂದಿಗೆ ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಸಿದ್ದರಾಮಯ್ಯನವರ ತಂಡವು ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸುತ್ತಿದೆ. ಬಸವಣ್ಣನವರು ಮೂರ್ತಿ ಪೂಜಕರು ಮತ್ತು ಅವರ ಅಂಕಿತನಾಮ ಕೂಡಲಸಂಗಮದೇವ ಎಂದಿದೆ. ಅವರ ವಚನಗಳಲ್ಲಿ ಶಿವನ ಹೆಸರಿದೆ ಎಂದು ಯತ್ನಾಳ್ ಪ್ರತಿಪಾದಿಸಿದರು.

ಕೆಲವು ಸ್ವಾಮೀಜಿಗಳು ಬಸವಣ್ಣನವರ ಹೆಸರನ್ನು "ಬಿಸಿನೆಸ್" ಮಾಡಿಕೊಂಡಿದ್ದಾರೆ. ಈ "ನಕ್ಸಲೆಟ್ ಸ್ವಾಮಿಗಳು" ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಇರುತ್ತಾರೆ ಎಂದು ಆರೋಪಿಸಿದರು.

'ಬಸವತತ್ವ'ದ ಬಗ್ಗೆ ಮಾತನಾಡುವ ಈ ಸ್ವಾಮೀಜಿಗಳಿಗೆ ಬಸವಣ್ಣನವರ ಕುರಿತು ಏನು ತಿಳಿದಿದೆ? ಬಸವಣ್ಣನವರು ಹುಟ್ಟಿದ್ದು ಮತ್ತು ಐಕ್ಯ ಆಗಿದ್ದು ವಿಜಯಪುರ ಜಿಲ್ಲೆಯಲ್ಲಿ ಎಂದು ಹೇಳಿದರು. ಸನಾತನ ಧರ್ಮವನ್ನು ನಿಂದಿಸುವವರು "ನಕ್ಸಲೆಟ್ ಗ್ಯಾಂಗ್" ಎಂದು ಯೀಳಿದರು.

ಬಸವಣ್ಣನವರು ಸಮಾನತೆಗಾಗಿ ಅನ್ನದಾಸೋಹ ಆರಂಭಿಸಿ ಅಂತರ-ಜಾತಿ ವಿವಾಹಗಳನ್ನು (ಅಸ್ಪೃಶ್ಯರ ಜೊತೆ ಬ್ರಾಹ್ಮಣರ ಮದುವೆ) ಮಾಡಿಸಿದ್ದರು. ಆದರೆ, "ನಿಮ್ಮ ಮಠಗಳಲ್ಲಿ ಅಸ್ಪೃಶ್ಯರ ಜೊತೆಗೆ ಲಿಂಗಾಯತರ ಮದುವೆ ಮಾಡಿಸಿದ್ದೀರಾ?" ಎಂದು ಸ್ವಾಮೀಜಿಗಳಿಗೆ ಅವರು ಪ್ರಶ್ನಿಸಿದರು.

ಅಭಿಯಾನದಲ್ಲಿ ಭಾಗಿಯಾದ ಎಲ್ಲ ಸ್ವಾಮೀಜಿಗಳು ಬಸವಣ್ಣನವರನ್ನು ನಕ್ಸಲಿಯ ನಾಯಕನನ್ನಾಗಿ ಮಾಡುತ್ತಿದ್ದಾರೆ. ಜಗಜ್ಯೋತಿ ಬಸವಣ್ಣನವರು ಎಂದಿಗೂ ಹಿಂದೂ ಧರ್ಮವನ್ನು ಬೈದಿಲ್ಲ, ಬದಲಿಗೆ ಧರ್ಮದಲ್ಲಿನ ನ್ಯೂನತೆಗಳ ಬಗ್ಗೆ ಮಾತ್ರ ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು