ವಿಜಯಪುರ: ಖ್ಯಾತ ರಂಗಭೂಮಿ ಕಲಾವಿದ, ಹಾಸ್ಯ ನಟ ಮತ್ತು ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ರಾಜು ತಾಳಿಕೋಟೆ (59) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಕಲಾ ಲೋಕದಲ್ಲಿ ತಮ್ಮ ವಿಶಿಷ್ಟ ಶೈಲಿಯ ನಟನೆ ಮತ್ತು ಹಾಸ್ಯದ ಮೂಲಕ ಜನಪ್ರಿಯರಾಗಿದ್ದ ರಾಜು ತಾಳಿಕೋಟೆ ಅವರು, ವಿಶೇಷವಾಗಿ 'ಕಲಿಯುಗದ ಕುಡುಕ' ಮತ್ತು 'ಕುಡುಕರ ಸಾಮ್ರಾಜ್ಯದ ಅಸಲಿ ಕುಡುಕ' ಎಂಬ ಪ್ರಖ್ಯಾತ ನಾಟಕಗಳ ಮೂಲಕ ಉತ್ತರ ಕರ್ನಾಟಕದ ರಂಗಭೂಮಿಯಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದರು. ಈ ಪ್ರಮುಖ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಸಹ ಬಿಡುಗಡೆಯಾಗಿ ಜನಮನ್ನಣೆ ಗಳಿಸಿದ್ದವು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾದ ರಾಜು ತಾಳಿಕೋಟೆ ಅವರು ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ನೆಲೆಸಿದ್ದರು. ಅವರ ಹಠಾತ್ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಟನ ಸಾವಿನಿಂದ ಕನ್ನಡ ಕಲಾ ಲೋಕವು ಒಬ್ಬ ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ.
Tags
News
