ಕುಚುಕು ಗೆಳೆಯರಲ್ಲಿ ಬಿರುಕು… ಎಂಬಿಪಿ - ಯತ್ನಾಳ `ದೋಸ್ತಿ’ ಈಗ ‘ಕುಸ್ತಿ’

ರಾಜಕೀಯವಾಗಿ ವಿರೋಧಿಗಳಾಗಿದ್ದರೂ ಪರಸ್ಪರ ಕುಚುಕು ಗೆಳೆಯರಂತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರ ನಡುವಿನ ಸ್ನೇಹದಲ್ಲಿ ದಿಢೀರ್ ಬಿರುಕು ಮೂಡಿದ್ದು, `ಖಾರ' ಪದಪ್ರಯೋಗದ ಮೂಲಕ ಉಭಯ ನಾಯಕರು ಟೀಕಾ ಪ್ರಹಾರ ನಡೆಸುತ್ತಿರುವುದು ಅವರ ದೋಸ್ತಿ ದೂರವಾಗಿದೆ ಎಂದು ಜನತೆ ಮಾತನಾಡಿಕೊಳ್ಳುವಂತಾಗಿದೆ.

ಸಚಿವ ಡಾ.ಎಂ.ಬಿ. ಪಾಟೀಲರ ಕಾರ್ಯಗಳನ್ನು ಪ್ರತಿ ವೇದಿಕೆಯಲ್ಲೂ ಹೊಗಳುತ್ತಿದ್ದ ಯತ್ನಾಳ `ಒಳ್ಳೆಯ ಕೆಲಸ ಮಾಡಿದವರನ್ನು ಹೊಗಳಲೇಬೇಕಲ್ರೀ ಎಂದು ಬಿಜೆಪಿಯಲ್ಲಿದ್ದಾಗಲೂ ಸಚಿವ ಎಂಬಿಪಿ ಅವರನ್ನು ಹೊಗಳುತ್ತಿದ್ದರು, ಇನ್ನೂ ಅನೇಕ ಸಂದರ್ಭದಲ್ಲಿ ಡಾ.ಎಂ.ಬಿ. ಪಾಟೀಲರಿಗೆ ಟೀಕೆ ಮಾಡಲೇಬೇಕಾದ ಅನಿವಾರ್ಯವಿದ್ದಲ್ಲಿಯೂ `ಮೃಧು'ವಾಗಿಯೇ ಟೀಕೆ ಮಾಡುತ್ತಿದ್ದ ಯತ್ನಾಳ ಈಗ ವೀರಾವೇಷದಿಂದ, ಏಕವಚನ ಅದರಲ್ಲೂ ಅಸಂವಿಧಾನಿಕ ಪದ ಪ್ರಯೋಗದಿಂದ ಜರಿದಿರುವುದು ಅವರ ಗೆಳೆತನದಲ್ಲಿ ಬಿರುಕು ಮೂಡಿದೆ ಎಂದು ಜನತೆ ಗ್ರಹಿಸುವಂತಾಗಿದೆ.

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳರು, `ಎಂ.ಬಿ. ಪಾಟೀಲ್ `…' ಮುಚ್ಚಿಕೊಂಡು ಇರಬೇಕು" ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಯತ್ನಾಳರ ಈ ಅತಿರೇಕದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲರು ಸಹ, ಶಾಸಕ ಯತ್ನಾಳರ ಜನ್ಮ ಜಾಲಾಡಿದರು. ಟೀಕೆಗೆ ಪ್ರಹಾರ ಎಂಬಂತೆ ಉತ್ತರ ಕರ್ನಾಟಕದ ಜವಾರಿ ಶೈಲಿ ಬಳಸಿ ಟಾಂಗ್ ನೀಡಿದ್ದಾರೆ. ಈ ಹಿಂದೆಯೂ ಯತ್ನಾಳರ ವಿರುದ್ಧ ಸಾತ್ವಿಕ ಟೀಕೆಗೆ ಮಾತ್ರ ಸೀಮಿತವಾಗಿದ್ದ ಡಾ.ಎಂ.ಬಿ. ಪಾಟೀಲರು ಈ ಬಾರಿ `ಖಾರ'ವಾಗಿಯೇ ತಿರುಗೇಟು ನೀಡಿದ್ದಾರೆ.

ಇನ್ನೂ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ವಿರಾಟ ಹಿಂದೂ ಸಮಾವೇಶ ನಡೆಸುವ ಘೋಷಣೆ ಯತ್ನಾಳ ನೇತೃತ್ವದ ತಂಡದಿಂದ ಮೊಳಗಿದ್ದು, ಯತ್ನಾಳರು ಡಾ.ಎಂ.ಬಿ. ಪಾಟೀಲರ ಕ್ಷೇತ್ರದಲ್ಲಿಯೇ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ, ಈ ಪಂಥಾಹ್ವಾನದ ಮುನ್ನವೇ ಸಚಿವ ಪಾಟೀಲ ಅವರಿಗಿಂತ ಹೆಚ್ಚು ಜನರನ್ನು ಸೇರಿಸುವೆ ಒಂದು ಸಾರಿ ಆಗಿಯೇ ಬಿಡಲಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ, ಹೀಗಾಗಿ ದೋಸ್ತಿಗಳ ನಡುವೆ `ಶಕ್ತಿ' ಪ್ರದರ್ಶನ ಏರ್ಪಡುವ ವಾತಾವರಣ ಅನಾವರಣಗೊಳ್ಳೂತ್ತಿದೆ.

ಈ ಹಿಂದೆ ಕಾರಜೋಳದಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಗಿ ರೈತರಿಂದ ಷೇರು ಸಹ ಪಡೆದುಕೊಳ್ಳಲಾಗಿತ್ತು. ಆಗ ಕಾರ್ಖಾನೆ ವಿಳಂಬವಾದಾಗ ರೈತರ ಕಾಳಜಿ ಹೊಂದಿದ್ದ ಡಾ.ಎಂ.ಬಿ. ಪಾಟೀಲರು ತಾವೇ ಮುಂದು ನಿಂತರು ಸಮಸ್ಯೆ ಸ್ವಾಲ್ವ್ ಮಾಡಿದರು, ಜನರ ವಿಷಯ ಬಂದಾಗ ಯಾವುದಕ್ಕೂ ರಾಜಿಯಾಗದ ಅವರು ಈಗ ಮೆಡಿಕಲ್ ಕಾಲೇಜ್ ತಾವೇ ಪರೋಕ್ಷವಾಗಿ ಪಿಪಿಪಿ ಮೂಲಕ ತರುತ್ತಿದ್ದಾರೆ ಎಂಬ ಪರೋಕ್ಷ ಆರೋಪಗಳಿಗೂ ಸಹ ಸ್ಪಷ್ಟ ಉತ್ತರ ನೀಡಿ `ಮಾಡುವುದಾದರೆ ಹತ್ತು ಮೆಡಿಕಲ್ ಕಾಲೇಜ್ ಮಾಡುವೆ, ಪಿಪಿಪಿಯಲ್ಲಿ ಆಸಕ್ತಿ ಇಲ್ಲ' ಎಂದು ವಿವಾದಗಳಿಗೆ ತೆರೆ ಎಳೆದಿದ್ದರು. ಹೀಗಾಗಿ ಈ ವಿಷಯದಲ್ಲಿ ಸಂಪೂರ್ಣ ಅಂತರ ಕಾಯ್ದುಕೊಳ್ಳುವುದು ದಟ್ಟವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿಯೂ ಈ ವಿಷಯವನ್ನೇ ಪ್ರಸ್ತಾಪಿಸಿ ಸರ್ಕಾರಿ ಮೆಡಿಕಲ್ ಕಾಲೇಜ್ ಪರವೇ ವಾದ ಮಾಡಿದ್ದಾರೆ ಎನ್ನಲಾಗಿದೆ.

ಪಿಪಿಪಿ ಮಾದರಿಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ಹಲವು ಸಂಘಟನೆಗಳು 'ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನಾ ಸಮಿತಿ' ಹೆಸರಿನಲ್ಲಿ ಹೋರಾಟ ಆರಂಭಿಸಿವೆ. ಈ ಹೋರಾಟವು 45 ಕ್ಕೂ ಹೆಚ್ಚು ದಿನಗಳನ್ನು ಸಹ ಪೂರೈಸಿದೆ. ಹೋರಾಟಗಾರರು ತಮ್ಮ ನೆತ್ತರು ಹರಿಸಿ ಸಹಿ ಮಾಡಿ ಸರ್ಕಾರಕ್ಕೆ ಕಠಿಣ ಸಂದೇಶ ಸಹ ರವಾನಿಸಿದ್ದಾರೆ. ಹೀಗಾಗಿ ಹೋರಾಟದ ತೀವ್ರತೆ - ಜನರ ಆಶಯ ಎರಡನ್ನೂ ಮನಗಂಡಿರುವ ಡಾ.ಎಂ.ಬಿ. ಪಿ ಸರ್ಕಾರಿ ಮೆಡಿಕಲ್ ಕಾಲೇಜ್ ಪರ ಧ್ವನಿ ಎತ್ತಿರುವುದು ಯತ್ನಾಳ ಮುನಿಸಿಗೆ ಕಾರಣವೇ? ಎಂಬುದು ಸಹ ಚರ್ಚೆಗೆ ಗ್ರಾಸವಾದ ವಿಷಯ.

ಪಿಪಿಪಿ ಕಾಲೇಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿಯೇ ಅಧಿವೇಶನದಲ್ಲಿ 500 ಕೋಟಿ ರೂ. ಬಂಡವಾಳ ಹೂಡಿಕೆಗೆ ಆಸಕ್ತಿ ವಹಿಸಿದ್ದೇನೆ ಎಂದು ಶಾಸಕ ಯತ್ನಾಳ ಹೇಳಿದ್ದರು. ಆದರೆ ಈ ವಿಷಯದಲ್ಲಿ ಯತ್ನಾಳ ಪರ ಬ್ಯಾಟಿಂಗ್ ಮಾಡದೇ ಜನರ ಆಶಯಗಳ ಪರವಾಗಿ ಪಾಟೀಲರು ಬ್ಯಾಟ್ ಬೀಸಿರುವುದು `ದೋಸ್ತಿ' ಮುರಿದು ಬೀಳಲು ಕಾರಣವೇ ಎಂಬ ಬೆಳಕಿನಲ್ಲಿ ಜನತೆ ಲೆಕ್ಕ ಹಾಕುವಂತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು