ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ್ ಸೇರಿದಂತೆ ಅನೇಕ ನಾಯಕರು ವಿಜಯೇಂದ್ರ ಕ್ಯಾಪ್ಟನಶಿಫ್ ವಿರುದ್ದ ಸಮರ ಸಾರಿದ್ದಾರೆ.
ಉತ್ತರ ಕರ್ನಾಟಕ ಭಾಗದಿಂದ ಯತ್ನಾಳ, ರಮೇಶ ಜಾರಕಿಹೊಳಿ, ಮೈಸೂರು ಭಾಗದಿಂದ ಪ್ರತಾಪ್ ಸಿಂಹ್, ಬಿಜೆಪಿ ಭದ್ರಕೋಟೆ ಶಿವಮೊಗ್ಗದಲ್ಲಿ ಕುಮಾರ ಬಂಗಾರಪ್ಪ ಹೀಗೆ ಪ್ರಭಾವಿ ನಾಯಕರೇ ವಿಜಯೇಂದ್ರ ವಿರುದ್ದ ಗುಡುಗುತ್ತಿರುವುದು ಬಿಜೆಪಿ ವಲಯದಲ್ಲಿ ಅದರಲ್ಲೂ ಕಾರ್ಯಕರ್ತ ವಲಯದಲ್ಲಿ ದೊಡ್ಡ ಟೆನ್ಷನ್ ಜೊತೆಗೆ ಫುಲ್ ಕನ್ಪ್ಯೂಷನ್ ಸೃಷ್ಟಿಸಿದೆ.
ಮಾಧ್ಯಮಗಳಿಂದಲೂ ಯತ್ನಾಳ ದೂರ:
ಬಿಜೆಪಿ ಆಂತರಿಕ ಅಲ್ಲ ಬಹಿರಂಗ ಸಮರ ಯಾವ ರೀತಿ ತಾರಕಕ್ಕೇರಿದೆ ಎಂದರೆ ವಿಜಯೇಂದ್ರ ವಿರುದ್ದ ಸದಾ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳರು ಮಾಧ್ಯಗಮಳಿಂದಲೂ ಡಿಸ್ಟನ್ ಮೆಂಟೇನ್ ಮಾಡಿ ಪ್ರಶ್ನೆಗಳಿಗೆ ವಿಜಯೇಂದ್ರನಿಗೆ ಕೇಳಿ ಎಂದು ಹೇಳಿ ಹೋಗುವಂತಾಗಿದೆ.
ಆದರೆ ತಮ್ಮ ವಿರುದ್ದ ಏಕ ವಚನ ಪದ ಪ್ರಯೋಗದ ಬಗ್ಗೆ ತಲೆ ಕೆಡಿಸಿಕೊಳ್ಳದ ವಿಜಯೇಂದ್ರ ಯತ್ನಾಳರು ಹಿರಿಯಣ್ಣ, ಏಕ ವಚನದಲ್ಲಿ ಕರೆದರೆ ತಪ್ಪೇನಿಲ್ಲ ಎಂದಷ್ಟೇ ಹೇಳಿದ್ದಾರೆ.
ವಿಜಯೇಂದ್ರ ವಿರುದ್ದದ ಟೀಂಗೆ ಯತ್ನಾಳ ಕ್ಯಾಪ್ಟನ್:
ತಾನು ಪ್ರತಿನಿಧಿಸುವ ಪಕ್ಷ ಆಡಳಿತಾರೂಢವಿದ್ದರೂ ಸಹ ಜನಪರ ವಿಷಯದಲ್ಲಿ ಎಡವಿದರೆ ಪ್ರತಿಪಕ್ಷ ನಾಯಕನಂತೆ ವಾಗ್ದಾಳಿ ನಡೆಸುವ ನಿಷ್ಠುರ ನಾಯಕ, ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಹೆಸರಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ವಿಜಯೇಂದ್ರ ನಾಯಕತ್ವ ವಿರುದ್ಧ ಗುಡುಗುತ್ತಿದ್ದಾರೆ.
ಕೆಲವು ದಶಕಗಳ ಹಿಂದೆಯೂ ಇದೇ ರೀತಿಯ ವಿದ್ಯಮಾನ ಬಿಜೆಪಿ ವಲಯದಲ್ಲಿ ಸೃಜಿಸಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಮರ ಸಾರಿದ್ದ ಯತ್ನಾಳ `ಯಡಿಯೂರಪ್ಪ ಹಠಾವೋ ಬಿಜೆಪಿ ಬಚಾವೋ' ಅಭಿಯಾನವನ್ನೇ ಆರಂಭಿಸಿದ್ದರು. ಈ ರಾಜಕೀಯ ಯುದ್ಧದಲ್ಲಿ ಯತ್ನಾಳ ಪಕ್ಷವನ್ನು ತ್ಯಜಿಸಬೇಕಾಯಿತು. ನಂತರ ನಡೆದ ವಿದ್ಯಮಾನಗಳಲ್ಲಿ ಪುನ: ಪಕ್ಷಕ್ಕೆ ಬಂದಿದ್ದೂ ಆಯಿತು.
ಈಗ ಯತ್ನಾಳರು ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯಾಧ್ಯಕ್ಷ ಬದಲಾವಣೆಗೆ ಪಟ್ಟು ಹಿಡಿದಿದ್ದು, ಮಾಜಿ ಸಚಿವ ರಮೇಶ ಜಾರಕಿಕೊಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕರು ಯತ್ನಾಳರಿಗೆ ಸಾಥ್ ನೀಡಿದ್ದಾರೆ.
ವಕ್ಫ್ ಸಮಸ್ಯೆಯನ್ನು ರಾಜ್ಯದಾದ್ಯಂತ ಹೋರಾಟ, ಹಿಂದೂ ಪರ ಸದಾ ವಕಲಾತ್ತು ವಹಿಸುವ ಯತ್ನಾಳ ರಾಜ್ಯದಾದ್ಯಂತ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.
ಜನಪರ ವಿಷಯದಲ್ಲಿ ಕಡ್ಡಿ ತುಂಡು ಮಾಡುವಂತೆ ಮಾತನಾಡುವ ಯತ್ನಾಳರ ಜನಪ್ರಿಯತೆ ವಿರೋಧ ಪಕ್ಷದಲ್ಲೂ ಕಡಿಮೆ ಇಲ್ಲ. ಇನ್ನೂ ಪಂಚಮಸಾಲಿ ಸಮಾಜದ ಹೋರಾಟವೇ ಇರಲಿ, ಹಿಂದೂಪರ ಹೋರಾಟವೇ ಇರಲಿ ಅದಕ್ಕೆ ಯತ್ನಾಳ ಒಂದು ದೊಡ್ಡ ಚೈತನ್ಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ಉಚ್ಛಾಟನೆ ಹೊಸತಲ್ಲ..:
ಎರಡು ಬಾರಿ ಪಕ್ಷದಿಂದ ಉಚ್ಛಾಟನೆಗೊಳಗಾಗಿ ಮತ್ತೆ ವಾಪಾಸ್ಸು ಬಂದಿರುವ ಯತ್ನಾಳರಿಗೆ ಶಿಸ್ತುಕ್ರಮ, ಉಚ್ಛಾಟನೆ ಎಂಬುದು ಕಾಮನ್. 2008 ರಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಯತ್ನಾಳರನ್ನು ಉಚ್ಛಾಟನೆ ಮಾಡಲಾಗಿತ್ತು. ಆದರೆ 2014ರ ಲೋಕಸಭೆ ಚುನಾವಣೆ ವೇಳೆಗೆ ಯತ್ನಾಳರಿಗೆ ಬಿಜೆಪಿ ಬಾಗಿಲು ತಾನಾಗಿಯೇ ತೆರೆದಿತ್ತು. ವಿಜಯಪುರ ಬಾಗಲಕೋಟೆ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಯತ್ನಾಳ ಶಕ್ತಿ ಬೇಕು ಎಂದು ಮನವರಿಕೆಯಾದಾಗಲೇ ಹೈಕಮಾಂಡ್ ಅವರನ್ನು ವಾಪಾಸ್ಸು ಕರೆಸಿಕೊಂಡಿತ್ತು. ಆಗ ಯಡಿಯೂರಪ್ಪ ಬಿಜೆಪಿಯಲ್ಲಿ ಇರಲಿಲ್ಲ. ಕೆಜೆಪಿ ಕಟ್ಟಿಕೊಂಡಿದ್ದರು. 2015 ರಲ್ಲಿ ವಿಧಾನಪರಿಷತ್ ಚುನಾವಣೆಗೆ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ನೀಡದೇ ಇದ್ದಾಗ ಬಂಡೆದ್ದ ಯತ್ನಾಳ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆಗ ಅವರನ್ನು ಮತ್ತೊಮ್ಮೆ ಉಚ್ಛಾಟನೆ ಮಾಡಲಾಗಿತ್ತು. ಆದರೆ ಅವಳಿ ಜಿಲ್ಲೆಗಳಲ್ಲಿ ತಾವು ಹೊಂದಿದ್ದ ಹಿಡಿತವನ್ನು ಸಾಬೀತುಪಡಿಸಿದ ಯತ್ನಾಳ ವಿಧಾಪರಿಷತ್ಗೆ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.