ಗುಮ್ಮಟನಗರಿಯಲ್ಲಿ ಶ್ವಾನ ಪ್ರದರ್ಶನ: ಭಯ ಹುಟ್ಟಿಸೋ ದೈತ್ಯ ಶ್ವಾನಗಳು

ವಿಜಯಪುರ: ದೈತ್ಯಾಕಾರ ದೇಹ, ಬೊಗಳಿದರೇ ಎಂಥ ಗಟ್ಟಿ ಗುಂಡಿಗೆ ಇದ್ದರೂ ಝಲ್ ಎನ್ನುವ ಶಬ್ದ, ವ್ಯಾಘ್ರ ಹುಲಿ ಹಾಗೆ ಗಾಂಭೀರ್ಯ ಇವುಗಳು ಒಂದೆಡೆಯಾದರೇ, ಇನ್ನೊಂದೆಡೆ ಮುದ್ದಾದ ಪುಟಾಣಿ ನಾಯಿಮರಿಗಳು, ಅವುಗಳ ನಾಜುಕಿನ ರ್ಯಾಂಪವಾಕ್ಗಳು ನೋಡುಗರನ್ನೂ ಮನಸೂರೆಗೊಳಿಸಿತು.
ಇವೆಲ್ಲವೂ ಕಂಡು ಬಂದಿದ್ದು ಗುಮ್ಮಟ ನಗರಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ದೇಶಿ, ವಿದೇಶಿ ತಳಿಗಳ ನಾಯಿಗಳು ಹಿರಿಯರ ಕಿರಿಯರ ಗಮನ ಸೆಳೆದವು. ಭಾರತೀಯ ಸೇನಾಪಡೆಗೆ ಸೇರ್ಪಡೆಯಾಗಿರುವ ಮುಧೋಳ ನಾಯಿ ಸೇರಿದಂತೆ ಅತಿ ದುಬಾರಿ ಬೆಲೆಯ ವಿದೇಶಿ ತಳಿಗಳ ನಾಯಿಗಳು ಪ್ರದರ್ಶನದಲ್ಲಿ ತಮ್ಮ ಗಮ್ಮತ್ತು ಪ್ರದರ್ಶಿಸಿದವು.
ಸೇಂಟ್ ಬರ್ನರ್ಡ್, ಗ್ರೇಟ್ ಡೇನ್, ಪಮೋರಿಯನ್, ಷಿಟ್, ಗೋಲ್ಡನ್ ರಿಟ್ರಿವರ್, ಜರ್ಮನ್ ಶಫರ್ಡ್, ಸೈಬೇರಿಯನ್ ಹಸ್ಕಿ, ಚೌಚೌ, ಪುಡಲ್, ಟಾಯ್ ಫಾಮ್, ಡ್ಯಾಷ ಒನ್, ಹೀಗೆ 22 ತಳಿಯ 247ಕ್ಕೂ ಹೆಚ್ಚಿನ ನಾಯಿಗಳು ವೇದಿಕೆಯಲ್ಲಿ ಕಸರತ್ತು ಪ್ರದರ್ಶಿಸುವ ಮೂಲಕ ನೆರೆದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡವು.

Dog Show

ಶ್ವಾನದ ನಡಿಗೆ, ದೇಹಾಕಾರ, ಹಲ್ಲು ಹಾಗೂ ನಾಯಿಗಳ ವರ್ತನೆ ಆಧಾರದಲ್ಲಿ ಸ್ಪರ್ಧೆ ನಡೆಯಿತು. ಪ್ರತಿ ಸುತ್ತಿನ ಸ್ಪರ್ಧೆಯಲ್ಲಿ ನಾಯಿಗಳು ರ್ಯಾಂಪ್ ವಾಕ್ನಂತೆ ಬಹಳ ನಾಜೂಕಿನ ಹೆಜ್ಜೆ ಹಾಕಿದವು. ಕೆಲವೊಂದು ತಳಿಗಳ ನಾಯಿಗಳು ನೋಡಲಿಕ್ಕೆ ಭಯ ಹುಟ್ಟಿಸುವಂತಿದ್ದರೂ ಬಹಳ ಸ್ನೇಹಮಯಿಯಾಗಿದ್ದವು. ಸುತ್ತಿನಿಂದ ಸುತ್ತಿಗೆ ಸ್ಪರ್ಧೆ ತೀವ್ರಗೊಂಡಂತೆ ನಾಯಿಗಳ ಪ್ರದರ್ಶನವೂ ಅತ್ಯಾಕರ್ಷಕವಾಗಿತ್ತು. ತಮ್ಮ ಮಾಲೀಕನ, ತರಬೇತುದಾರರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದ ನಾಯಿಗಳ ಪ್ರರ್ದಶನ ಮಾಲೀಕರು, ತರಬೇತುದಾರರಿಗೆ ಮಾತ್ರವಲ್ಲ ನೋಡುಗರಿಗೂ ಉತ್ತೇಜನ ನೀಡುವಂತಿತ್ತು.
ಉಚಿತ ಲಸಿಕೆ: ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ಶ್ವಾನಗಳಿಗೆ ರೇಬಿಸ್ ವ್ಯಾಕ್ಸಿನ್ ಹಾಕಲಾಯಿತು. ಉಚಿತವಾಗಿ ಆಹಾರಗಳನ್ನು ನೀಡಲಾಯಿತು. ಪ್ರದರ್ಶನದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಹುಚ್ಚುನಾಯಿಗಳಿಂದ ಹರಡುವ ರೆಬಿಸ್ ರೋಗದ ಕುರಿತು ಜಾಗೃತಿಯನ್ನೂ ಮೂಡಿಸಲಾಯಿತು.
ಜಿಲ್ಲೆಯ ಜನರಲ್ಲಿ ತಿಳಿವಳಿಕೆ ನೀಡುವುದರ ಜೊತೆಗೆ ಶ್ವಾನ ಪ್ರಿಯರಿಗೆ ಹಾಗು ಯುವಕರು ಸ್ವಯಂ ಉದ್ಯೋಗ ಮಾಡಲು ಈ ಶ್ವಾನ ಪ್ರದರ್ಶನ ಪ್ರೇರಣೆಯಾಯಿತು. ವಿಜಯಪುರ ನಗರದಲ್ಲಿಯೇ ಸುಮಾರು 4 ರಿಂದ 5 ಲಕ್ಷದ ವರೆಗೆ ಶ್ವಾನ ಸಾಕಾಣಿಕೆ ಸಂಬಂಧಿಸಿದ ಸಲಕರಣೆ ಆಹಾರಗಳು ಮಾರಾಟವಾಗುತ್ತಿದ್ದು. ಇದು ಶ್ವಾನ ಪ್ರೀಯರಿಗೆ ಉದ್ಯಮ ಪ್ರಾರಂಭಿಸಲು ಪ್ರೇರಣೆಯಾಗಲಿದೆ.
ಬಹುಮಾನ: ಪ್ರದರ್ಶನದಲ್ಲಿ ಒಟ್ಟು 11 ನಾಯಿಗಳಿಗೆ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಒಟ್ಟು ಮೂರು ವಿಭಾಗಳಾಗಿ ವಿಂಗಡಿಸಿ ಪ್ರಶಸ್ತಿ ಹಂಚಿಕೆ ಮಾಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು