ವಿಜಯಪುರ: ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ವಿರೋಧಿ ಸರ್ಕಾರವಾಗಿದ್ದು, ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಿಗೆ ಅನುದಾನ ಮಂಜೂರು ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಅನುದಾನವನ್ನು ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ವಿರೋಧಿ ಎಂದು ದೂರಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುದಾನದ ತಾರತಮ್ಯ ಮಾಡಿದ್ದಾರೆ. 2024-25ನೇ ಸಾಲಿನ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ ಡಿಬಿ) 5 ಸಾವಿರ ಕೋಟಿ ರೂಪಾಯಿ ಮೊತ್ತದ ಕ್ರಿಯಾ ಯೋಜನೆ ರೂಪಿಸಲು ಅನುಮೋದನೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದರೂ. ಈ ಸಾಲಿನ ಅನುದಾನದಲ್ಲಿ ಮಂಡಳಿಗೆ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ.
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕಾ ಖರ್ಗೆ ಅವರೇ ಸಂಬಂಧಪಡದ ವಿಷಯಗಳಿಗೆಲ್ಲಾ ಅನವಶ್ಯಕವಾಗಿ ಮೂಗು ತೂರಿಸುವ ನೀವು ಕಲ್ಯಾಣ ಕರ್ನಾಟಕಕ್ಕೆ ಬರಬೇಕಾದ ಅನುದಾನದ ವಿಷಯದಲ್ಲಿ ಮೌನವಾಗಿರುವುದೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇನ್ನು ಈ ವಿಚಾರದಲ್ಲಿ ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ ಎಂದು ವಿರೋಧ ಪಕ್ಷದವರಿಗೆ ಸವಾಲು ಹಾಕುತ್ತೀರಲ್ಲ. ಅದರ ಬದಲು ತಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿ ಸರ್ಕಾರದ ಅನುದಾನ ಕಲ್ಯಾಣ ಕರ್ನಾಟಕಕ್ಕೆ ತಲುಪುವಂತೆ ಮಾಡಿ. ತಮ್ಮ ತಂದೆ, ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರ ಕೈಯಿಂದ ಮುಖ್ಯಮಂತ್ರಿಗಳಿಗೆ ಸೂಚನೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
2024 ಹಾಗೂ 2025ನೇ ಸಾಲಿನ ಆರ್ಥಿಕ ವರ್ಷದಲ್ಲಿ 5 ಸಾವಿರ ಕೋಟಿ ರೂಪಾಯಿ ಅನುಮೋದನೆಯನ್ನೇನೋ ಕೊಡಲಾಗಿದೆ. ಆದರೆ, ಆರ್ಥಿಕ ವರ್ಷವೇ ಮುಕ್ತಾಯವಾಗುತ್ತಾ ಬಂದರೂ ಈ ಮೊತ್ತವನ್ನು ಬಿಡುಗಡೆಯೇ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಕಲಬುರ್ಗಿಯಲ್ಲಿ ಸಂಪುಟ ಸಭೆ ಮಾಡಿ ಪುಂಖಾನುಪುಂಖವಾಗಿ ಘೋಷಣೆಗಳನ್ನು ಮಾಡಿದರಲ್ಲ, ಅದು ಕೇವಲ ಒಂದು ದಿನದ ಜಾಹಿರಾತಿಗೆ ಸೀಮಿತವಾಯ್ತಾ ಅಥವಾ ಅದನ್ನೇನಾದರೂ ಕಾರ್ಯರೂಪಕ್ಕೆ ತರುವ ದೊಡ್ಡ ಮನಸ್ಸು ಮಾಡುತ್ತೀರೋ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ: ರಾಜ್ಯ ಕಾಂಗ್ರೆಸ್ ಸರ್ಕಾರವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕೊಡುವಲ್ಲಿ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
Tags
News